ಖೋಸ್ಟ್ (ಅಫ್ಘಾನಿಸ್ತಾನ):ಆತ್ಮಹತ್ಯಾ ದಾಳಿ ಹಾಗೂ ಗುಂಡಿನ ಚಕಮಕಿ ವೇಳೆ ಮೂವರು ಸಾರ್ವಜನಿಕರು ಹಾಗೂ ನಾಲ್ವರು ಉಗ್ರರು ಮೃತಪಟ್ಟಿರುವ ಘಟನೆ ಪೂರ್ವ ಅಫ್ಘಾನಿಸ್ತಾನದ ಪೊಲೀಸ್ ನೆಲೆಯ ಸಮೀಪ ನಡೆದಿದೆ.
ಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ದಾಳಿ ಸ್ಫೋಟಕ ತುಂಬಿದ್ದ ವಾಹನವೊಂದು ಖೋಸ್ಟ್ ಬಳಿಯ ವಿಶೇಷ ಪೊಲೀಸ್ ಪಡೆಗಳ ನೆಲೆಯ ಸಮೀಪ ಸ್ಫೋಟಗೊಂಡಿತ್ತು. ಇದಾದ ನಂತರ ಉಗ್ರರೊಂದಿಗೆ ಅಫ್ಘನ್ ರಕ್ಷಣಾ ಪಡೆಗಳು ಗುಂಡಿನ ಚಕಮಕಿ ನಡೆಸಿದ್ದು, ಬಾಂಬ್ ದಾಳಿಯಲ್ಲಿ ಮೂವರು ಸಾರ್ವಜನಿಕರು ಮೃತಪಟ್ಟಿದ್ದಾರೆ. ಜೊತೆಗೆ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಫ್ಘನ್ ಅಧಿಕಾರಿಗಳು ತಿಳಿಸಿದ್ದಾರೆ.
ಖೋಸ್ಟ್ ಆಸ್ಪತ್ರೆಯ ಮುಖ್ಯಸ್ಥರಾದ ಸಖಿ ಸರ್ದಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸೇನೆ ಹಾಗೂ ಉಗ್ರರಿಗೆ ಇಬ್ಬರಿಗೂ ಗಾಯವಾಗಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಅವರೆಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕತಾರ್ನಲ್ಲಿ ತಾಲಿಬಾನ್ ಹಾಗೂ ಆಫ್ಘನ್ ಸರ್ಕಾರದ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ. ಈ ಘಟನೆಯ ಹೊಣೆ ಇನ್ನೂ ಯಾವ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ.
ಮತ್ತೊಂದೆಡೆ ವಿಶ್ವಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಉಗ್ರರ ದಾಳಿಯಲ್ಲಿ ನಾಗರಿಕರ ಸಾವು ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಕಡಿಮೆಯಾಗಿದೆ ಎಂದು ಮಾಹಿತಿ ಬಹಿರಂಗಪಡಿಸಿದೆ.