ಜಕಾರ್ತಾ: ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಭೂಕಂಪ ಹಾಗೂ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 96ಕ್ಕೆ ಏರಿಕೆಯಾಗಿದ್ದು, ಮನೆ-ಮಠ ಕಳೆದುಕೊಂಡ ಸುಮಾರು 70 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ (ಬಿಎನ್‌ಪಿಬಿ) ಮಾಹಿತಿ ನೀಡಿದೆ.
ಇಂಡೋನೇಷ್ಯಾ ಭೂಕಂಪ - ಪ್ರವಾಹ: ಮೃತರ ಸಂಖ್ಯೆ 96ಕ್ಕೆ ಏರಿಕೆ, 70 ಸಾವಿರ ಮಂದಿ ಸ್ಥಳಾಂತರ - earthquake in West Sulawesi province
ಇಂಡೋನೇಷ್ಯಾದ ದಕ್ಷಿಣ ಕಾಲಿಮಂತನ್ ಪ್ರಾಂತ್ಯದಲ್ಲಿ ಪ್ರವಾಹ ಹಾಗೂ ಸುಲವೇಸಿ ಪ್ರಾಂತ್ಯದಲ್ಲಿ ಭೂಕಂಪದಿಂದಾಗಿ ಈವರೆಗೆ ಒಟ್ಟು 96 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಜನವರಿ 14ರಂದು ಇಂಡೋನೇಷ್ಯಾದ ದಕ್ಷಿಣ ಕಾಲಿಮಂತನ್ ಪ್ರಾಂತ್ಯದಲ್ಲಿ ಸುರಿದ ಭಾರಿ ಮಳೆಯು 25 ಸಾವಿರ ಮನೆಗಳಿಗೆ ಹಾನಿಯುಂಟು ಮಾಡಿತ್ತು. ಜನವರಿ 16 ರಂದು ಸುಲವೇಸಿ ಪ್ರಾಂತ್ಯದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಎರಡು ಘಟನೆಗಳಲ್ಲಿ ಅನೇಕರು ಕಾಣೆಯಾಗಿದ್ದು, ನೂರಾರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಲವೇಸಿ ಪ್ರಾಂತ್ಯದಲ್ಲಿ ಉಂಟಾದ ಭೂಕಂಪದಿಂದಾಗಿ 81 ಜನರು ಈವರೆಗೆ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಅನೇಕರು ಸಿಲುಕಿಕೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದೆ. ಸಂತ್ರಸ್ತರಿಗಾಗಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಕಾರ್ಗೋ ವಿಮಾನಗಳ ಮೂಲಕ ಅವರಿಗೆ ಆಹಾರ, ಹೊದಿಕೆಗಳನ್ನು ಪೂರೈಕೆ ಮಾಡಲಾಗುತ್ತಿದೆ.