ಕಾಬೂಲ್ :ಕಾಬೂಲ್ ವಿಮಾನ ನಿಲ್ದಾಣದಲ್ಲಾದ ಗುಂಡಿನ ದಾಳಿಯಲ್ಲಿ ಸೋಮವಾರದಿಂದ ಈವರೆಗೆ 40 ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಕಮಾಂಡರ್ ತಿಳಿಸಿದ್ದಾರೆ. ವಿದೇಶ ಪ್ರವಾಸದ ಬಗ್ಗೆ ಹರಡುತ್ತಿರುವ ಸುಳ್ಳು ವದಂತಿಗಳಿಂದ ಜನರು ಮೋಸ ಹೋಗಬಾರದು. ಜನರು ವಿಮಾನ ನಿಲ್ದಾಣಕ್ಕೆ ಬರುವುದನ್ನು ನಿಲ್ಲಿಸಬೇಕಾಗಿ ಕೇಳಿಕೊಂಡಿದ್ದಾರೆಂದು ಅಫ್ಘಾನ್ ಮಾಧ್ಯಮ ವರದಿ ಮಾಡಿದೆ.
ಅಫ್ಘಾನಿಸ್ತಾನದಲ್ಲಿ ಶಾಶ್ವತ ಶಾಂತಿ ಮತ್ತು ಪ್ರಗತಿಯನ್ನು ತರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ತಾಲಿಬಾನ್ ತಿಳಿಸಿದೆ. ವಿಮಾನ ನಿಲ್ದಾಣದಲ್ಲಿ 30 ರಿಂದ 40 ಜನರು ಸಾವನ್ನಪ್ಪಿದ್ದಾರೆ. ಮತ್ತು ಹಲವರು ಗಾಯಗೊಂಡಿದ್ದಾರೆ. ಜನರು ತಮ್ಮ ಮನೆಯಲ್ಲಿಯೇ ಇರಬೇಕು, ಅವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ಕಮಾಂಡರ್ ಮೊಹೀಬುಲ್ಲಾ ಹೆಕ್ಮತ್ ತಿಳಿಸಿದ್ದಾರೆ.
ಯುಎಸ್ ಮತ್ತು ಇತರೆ ಪಾಶ್ಚಿಮಾತ್ಯ ದೇಶಗಳು ತಮ್ಮ ನಾಗರಿಕರನ್ನು ಮತ್ತು ಅಫ್ಘಾನ್ ಮಿತ್ರರನ್ನು ದೇಶದಿಂದ ಸ್ಥಳಾಂತರಿಸುವ ಸಲುವಾಗಿ ತಮ್ಮ ವಿಮಾನ ಸಂಚಾರವನ್ನು ಪುನಾರಂಭಿಸಿವೆ. ವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ನಗರದಲ್ಲಿ ಮಂಗಳವಾರವೂ ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಅಫ್ಘಾನಿಸ್ತಾನದ ಜನಸಂದಣಿ ರೂಪುಗೊಂಡಿತ್ತು.