ಹೆರಾತ್( ಅಫ್ಘಾನಿಸ್ತಾನ): ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸೋಮವಾರ ಸಂಭವಿಸಿದ ಭೂಕಂಪದ ನಂತರ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾದ್ಘಿಸ್‌ನ ಪಶ್ಚಿಮ ಪ್ರಾಂತ್ಯದ ಖಾದಿಸ್ ಜಿಲ್ಲೆಯಲ್ಲಿ ಮನೆಗಳ ಮೇಲ್ಛಾವಣಿ ಕುಸಿದ ಪರಿಣಾಮ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬಾಜ್ ಮೊಹಮ್ಮದ್ ಸರ್ವಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅಮೆರಿಕದ ಜಿಯೋಲಾಜಿಕಲ್ ಸರ್ವೆ ಪ್ರಕಾರ ರಿಕ್ಟರ್ ಮಾಪಕದಲ್ಲಿ ಭೂಕಂಪವು 5.3 ತೀವ್ರತೆ ದಾಖಲಿಸಿದೆ ಎಂದು ತಿಳಿದು ಬಂದಿದೆ. ಭೂಕಂಪದಲ್ಲಿ ಸಾವನ್ನಪ್ಪಿದ 26 ಜನರಲ್ಲಿ ಐದು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಸೇರಿದ್ದಾರೆ. ಇನ್ನೂ ನಾಲ್ವರು ಗಾಯಗೊಂಡಿದ್ದಾರೆ. ಎಂದು ಸರ್ವಾರಿ ಮಾಹಿತಿ ನೀಡಿದ್ದಾರೆ.
ಓದಿ:ಎಲ್ಲ ರಾಷ್ಟ್ರಗಳು ಮೂರನೇ ಡೋಸ್ನಲ್ಲಿದ್ದರೆ, ಈ ಪುಟ್ಟ ರಾಷ್ಟ್ರದಲ್ಲಿ 4ನೇ ಡೋಸ್ ಲಸಿಕಾ ಅಭಿಯಾನ!
ಭೂಕಂಪದಿಂದ ಪ್ರಾಂತ್ಯದ ಮುಖರ್ ಜಿಲ್ಲೆಯ ನಿವಾಸಿಗಳಿಗೆ ಹಾನಿಯುಂಟಾಗಿದೆ. ಆದರೆ, ಸಾವು-ನೋವುಗಳು ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲವೆಂದು ಅಧಿಕಾರಿ ತಿಳಿಸಿದ್ದಾರೆ.
ಕಳೆದ 20 ವರ್ಷಗಳಲ್ಲಿ ಅಂತಾರಾಷ್ಟ್ರೀಯ ನೆರವಿನಿಂದ ಕಡಿಮೆ ಲಾಭವನ್ನು ಪಡೆದಿರುವ ವಿನಾಶಕಾರಿ ಬರಗಾಲದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಖಾದಿಸ್ ಒಂದಾಗಿದೆ.
ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನ ಸಮೀಪವಿರುವ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ.
2015 ರಲ್ಲಿ, ದಕ್ಷಿಣ ಏಷ್ಯಾದಾದ್ಯಂತ ಪರ್ವತ ಶ್ರೇಣಿಯಲ್ಲಿ ಕೇಂದ್ರೀಕೃತವಾಗಿರುವ 7.5 ತೀವ್ರತೆಯ ಪ್ರಬಲ ಭೂಕಂಪವು ಪಾಕಿಸ್ತಾನದಲ್ಲಿ ಸಂಭವಿಸಿದಾಗ ಸುಮಾರು 280 ಜನರು ಸಾವನ್ನಪ್ಪಿದರು. ಆ ದುರಂತದಲ್ಲಿ, 12 ಯುವ ಅಫ್ಘಾನಿಸ್ತಾನದ ಹುಡುಗಿಯರು ತಮ್ಮ ಶಾಲಾ ಕಟ್ಟಡದಿಂದ ಪಲಾಯನ ಮಾಡಲು ಪ್ರಯತ್ನಿಸಿದಾಗ ಕಾಲ್ತುಳಿತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.