ಕಾಬೂಲ್(ಅಫ್ಘಾನಿಸ್ತಾನ):ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡ ನಂತರ, ದೇಶವನ್ನು ತೊರೆದಿದ್ದ ಅಶ್ರಫ್ ಘನಿ ಅಫ್ಘಾನಿಸ್ತಾನದ ಜನರ ಕ್ಷಮೆ ಕೇಳಿದ್ದಾರೆ. ಈ ಕುರಿತು ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದು, ರಕ್ತಪಾತವನ್ನು ತಡೆಯಲು ತಾನು ಅಫ್ಘಾನಿಸ್ತಾನ ತೊರೆದಿದ್ದಾಗಿ ಹೇಳಿಕೊಂಡಿದ್ದಾರೆ.
ಅಫ್ಘಾನಿಸ್ತಾನದ ಜನರನ್ನು ಕೈಬಿಡುವ ಉದ್ದೇಶವನ್ನು ನಾನು ಹೊಂದಿರಲಿಲ್ಲ ಎಂದಿರುವ ಅಶ್ರಫ್ ಘನಿ 1990ರಲ್ಲಿ ಆಫ್ಘನ್ನಲ್ಲಿ ನಡೆದ ಅಂತರ್ಯುದ್ಧದಂತಹ ವಾತಾವರಣ ಮರುಕಳಿಸಬಾರದು ಎಂಬ ಕಾರಣಕ್ಕೆ ನಾನು ದೇಶ ತೊರೆಯಬೇಕಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.
'ಕಾಬೂಲ್ ಅನ್ನು ತೊರೆಯುವುದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ. ನಾನು ಕಾಬೂಲ್ ತೊರೆಯುವುದರಿಂದಲೇ ಬಂದೂಕುಗಳು ಮೌನವಾಗುತ್ತವೆ. ಅಲ್ಲಿನ 6 ಮಿಲಿಯನ್ ಮಂದಿಯ ಪ್ರಾಣ ರಕ್ಷಣೆಯಾಗುತ್ತದೆ ಎಂಬುದು ನನಗೆ ತಿಳಿದಿತ್ತು. ದೇಶದ ಜನರು ಕ್ಷಮಿಸಬೇಕು ಎಂದು ಭಾವನಾತ್ಮಕವಾಗಿ ಆಶ್ರಫ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಫ್ಘಾನಿಸ್ತಾನವನ್ನು ಸಮೃದ್ಧವಾಗಿ ನಿರ್ಮಿಸಲು ನನ್ನ ಜೀವನದ 20 ವರ್ಷಗಳನ್ನು ಮೀಸಲಿಟ್ಟಿದ್ದೇನೆ. ಇಂತಹ ದೇಶವನ್ನು, ಜನರನ್ನು ತ್ಯಜಿಸುವುದು ನನ್ನ ಉದ್ದೇಶವಾಗಿರಲಿಲ್ಲ, ಭದ್ರತಾ ಪಡೆಗಳ ಸಲಹೆ ಮೇರೆಗೆ ನಾನು ದೇಶವನ್ನು ಬಿಟ್ಟಿದ್ದೆ ಎಂದು ಆಶ್ರಫ್ ಹೇಳಿದ್ದಾರೆ.
ಕಾಬೂಲ್ನಿಂದ ಹೊರಡುವಾಗ ಸಾಕಷ್ಟು ಹಣ ತೆಗೆದುಕೊಂಡು ಹೋಗಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಈ ಆರೋಪವು ಸಂಪೂರ್ಣ ಸುಳ್ಳು ಎಂದಿದ್ದಾರೆ. ನನ್ನ ಬಳಿ ಅನುವಂಶೀಯವಾಗಿ ಪಡೆದುಕೊಂಡಿರುವ ಸಾಕಷ್ಟು ಹಣವಿದೆ. ನನ್ನ ಆಸ್ತಿಯನ್ನು ಘೋಷಿಸಿಕೊಂಡಿದ್ದೇನೆ. ನನ್ನ ಪತ್ನಿಗೆ ಲೆಬನಾನ್ನಲ್ಲಿರುವ ಆಸ್ತಿಯ ಬಗ್ಗೆಯೂ ಘೋಷಿಸಿದ್ದೇನೆ. ಯಾರಾದರೂ ಪರಿಶೀಲನೆ ಮಾಡುವುದಾದರೆ ಮಾಡಲಿ ಎಂದು ಅಶ್ರಫ್ ಹೇಳಿದ್ದಾರೆ.
ಕಳೆದ ಆಗಸ್ಟ್ 15ರ ಭಾನುವಾರ ಮೊದಲು ಕಾಬೂಲ್ ಹೊರವಲಯಕ್ಕೆ ತಾಲಿಬಾನ್ ಉಗ್ರರು ಲಗ್ಗೆ ಇಟ್ಟ ಸಂದರ್ಭದಲ್ಲಿ ದೇಶ ತೊರೆದಿದ್ದ ಅಶ್ರಫ್ ಘನಿ ತಮ್ಮ ದೇಶದ ಭದ್ರತಾ ಸಲಹೆಗಾರನೊಂದಿಗೆ ದೇಶವನ್ನು ತೊರೆದಿದ್ದರು. ಈಗ ಅವರು ಪತ್ರ ಬರೆದಿದ್ದು, ದೇಶದ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ:ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯಲ್ಲಿ ಭಾರತ ಕೊಡುಗೆ ಅಮೂಲಾಗ್ರ: ಮೀನಾಕ್ಷಿ ಲೇಖಿ