ಮುಜಫರಾಬಾದ್ (ಪಾಕ್ ಆಕ್ರಮಿತ ಕಾಶ್ಮೀರ):ಇಲ್ಲಿನನೀಲಂ ಮತ್ತು ಜೀಲಂ ನದಿಗಳ ಬಳಿ ನಿರ್ಮಿಸುತ್ತಿರುವ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿ ಚೀನಾ ಮತ್ತು ಪಾಕಿಸ್ತಾನ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ನಿವಾಸಿಗಳು ಪ್ರತಿಭಟನೆ ನಡೆಸಿದರು.
ನದಿಗಳಿಗೆ ಅಣೆಕಟ್ಟುವಿನೊಂದಿಗೆ ಕೊಹಾಲಾ ಜಲ ವಿದ್ಯುತ್ ಯೋಜನೆಯನ್ನು ಚೀನಾ ಮತ್ತು ಪಾಕಿಸ್ತಾನ ಕೈಗೊಂಡಿವೆ. ಇದರಿಂದ ಪರಿಸರದ ಮೇಲೆ ಅಪಾರ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿವಾದಿತ ಪ್ರದೇಶದ ನದಿ ಒಪ್ಪಂದಕ್ಕೆ ಯಾವ ಕಾನೂನಿನಡಿಯಲ್ಲಿ ಸಹಿ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಕೇಳಿದರು. ಪಾಕಿಸ್ತಾನ ಮತ್ತು ಚೀನಾ ನದಿಗಳನ್ನು ಆಕ್ರಮಿಸಿಕೊಳ್ಳುವ ಮೂಲಕ ಯುಎನ್ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸುತ್ತಿವೆ. ಕೂಡಲೇ ಎಲ್ಲಾ ಯೋಜನೆಗಳನ್ನು ನಿಲ್ಲಿಸುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದರು.
ಕೊಹಾಲಾದಲ್ಲಿ 2.4 ಬಿಲಿಯನ್ ಡಾಲರ್ ವೆಚ್ಚದ 1,124 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯ ನಿರ್ಮಾಣಕ್ಕಾಗಿ ಇತ್ತೀಚೆಗೆ ಚೀನಾದ ಕಂಪನಿ, ಪಾಕಿಸ್ತಾನ ಮತ್ತು ಚೀನಾ ಸರ್ಕಾರಗಳ ನಡುವೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು.