ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಉದ್ರಿಕ್ತ ಜನಸಮೂಹವೊಂದು ಹಿಂದೂ ಸಂತನ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ.
ಈ ಘಟನೆ ಕರಕ್ ಜಿಲ್ಲೆಯ ತೇರಿ ಪ್ರದೇಶದಲ್ಲಿ ನಡೆದಿದೆ. "ಧಾರ್ಮಿಕ ಸಮುದಾಯದ ಕೆಲವು ಸ್ಥಳೀಯ ಹಿರಿಯರ ನೇತೃತ್ವದಲ್ಲಿ ಸ್ಥಳದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿ ಪ್ರತಿಭಟನೆ ನಡೆಸಿದರು. ಅವರೆಲ್ಲಾ ಹಿಂದೂ ಪೂಜಾ ಸ್ಥಳವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು" ಎಂದು ಘಟನೆಗೆ ಸಾಕ್ಷಿಯಾದ ಸ್ಥಳೀಯ ನಿವಾಸಿ ಹೇಳಿದ್ದಾರೆ.
"ದೇವಾಲಯದ ಹೊರಗೆ ಜಮಾಯಿಸಿದ್ದ ಪ್ರತಿಭಟನಾನಿರತ ಜನರು, ಕೆಲ ಕಾಲ ಭಾಷಣ ಮಾಡಿ ದೇವಾಲಯದತ್ತ ತೆರಳಿ ಅದರ ಮೇಲೆ ದಾಳಿ ಮಾಡಿದರು" ಎಂದು ಹೇಳಿದ್ದಾರೆ.
1920 ಕ್ಕಿಂತ ಮೊದಲು ನಿರ್ಮಿಸಲಾದ ಈ ದೇವಾಲಯವು ಐತಿಹಾಸಿಕ ಪೂಜಾ ಸ್ಥಳವಾಗಿತ್ತು.
"ಘೋಷಣೆಗಳನ್ನು ಕೂಗುತ್ತಿದ್ದ ಜನಸಮೂಹವು ನೆಲಸಮಗೊಳಿಸುವ ಮೊದಲು ದೇವಾಲಯಕ್ಕೆ ಬೆಂಕಿ ಹಚ್ಚಿದೆ. ಹಿಂದೂ ಸಮುದಾಯದ ಸದಸ್ಯರ ಒಡೆತನದ ನಿರ್ಮಾಣ ಹಂತದಲ್ಲಿದ್ದ ಮನೆಯನ್ನು ನೆಲಸಮ ಮಾಡಲಾಗಿದೆ" ಎಂದು ಇನ್ನೊಬ್ಬ ಸ್ಥಳೀಯ ನಿವಾಸಿ ಹೇಳಿದ್ದಾರೆ.
ಹತ್ತಿರದ ಹಳ್ಳಿಗಳ ನಿವಾಸಿಗಳು ಹಿಂದೂ ದೇವಾಲಯವನ್ನು ತೆಗೆದುಹಾಕುವ ಬೇಡಿಕೆಯೊಂದಿಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರೂ ಕೂಡ ಪೊಲೀಸರು ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಓದಿ:ಸಂಪುಟ ಸದಸ್ಯರಿದ್ದ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಏರ್ಪೋರ್ಟ್ನಲ್ಲಿ ಬಾಂಬ್ ಸ್ಫೋಟ: 25 ಮಂದಿ ಬಲಿ!
ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋಗಳು ಹರಿದಾಡುತ್ತಿದ್ದು, ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನರಿರುವುದನ್ನು ಕಾಣಬಹುದಾಗಿದೆ. ಸ್ಥಳದಲ್ಲಿ ಬೆಂಕಿ ಹೊತ್ತಿರುವ ಹೊಗೆಯಿಂದ ತುಂಬಿರುವ ಮತ್ತು ಗೋಡೆಗಳನ್ನು ಉರುಳಿಸಿರುವ ದೃಶ್ಯಗಳನ್ನು ನೋಡಬಹುದಾಗಿದೆ.
ಕರಕ್ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಘಟನೆಯನ್ನು ದೃಢಪಡಿಸಿದ್ದಾರೆ. "ನಿವಾಸಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು. ಧರ್ಮಗುರುವೊಬ್ಬರು, ಜನಸಮೂಹವನ್ನು ಪ್ರಚೋದಿಸಿದ ಕಾರಣ ಅವರು ದೇವಾಲಯದ ಮೇಲೆ ದಾಳಿ ನಡೆಸಲು ಮುಂದಾದರು" ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಇರ್ಫಾನುಲ್ಲಾ ಹೇಳಿದ್ದಾರೆ.
ಪಾಕಿಸ್ತಾನದ ಫೆಡರಲ್ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ ಈ ಘಟನೆಯನ್ನು ಖಂಡಿಸಿದ್ದು, ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸರ್ಕಾರವನ್ನು ಕೋರಿದ್ದಾರೆ.
ಈ ಹಿಂದೆ 1997 ರಲ್ಲೂ ಈ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ನ ಆದೇಶದ ನಂತರ 2005ರಲ್ಲಿ ಪುನರ್ ನಿರ್ಮಾಣ ಮಾಡಲಾಗಿತ್ತು.