ಕೊಲಂಬೊ:ಈಗಾಗಲೇ ಕೊರೊನಾ ಮೂರನೇ ಅಲೆಯನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅಲ್ಫಾ (B.1.1.7) ಮತ್ತು ಡೆಲ್ಟಾ ( B.1.617.2) ರೂಪಾಂತರಗಳು ಪತ್ತೆಯಾಗಿವೆ ಎಂದು ಶ್ರೀಲಂಕಾದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
B.1.1.7 ರೂಪಾಂತರವು ಮೊದಲು ಬ್ರಿಟನ್ನಲ್ಲಿ ಹಾಗೂ B.1.617.2 ರೂಪಾಂತರವು ಮೊದಲು ಭಾರತದಲ್ಲಿ ಪತ್ತೆಯಾಗಿತ್ತು. ಕೊರೊನಾ ವೈರಸ್ ರೂಪಾಂತರಗಳನ್ನು ಆಯಾ ದೇಶಗಳ ಹೆಸರಿಟ್ಟು ಕರೆಯಬಾರದೆಂಬ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು (WHO) ಅಲ್ಫಾ, ಡೆಲ್ಟಾದಂತಹ ಗ್ರೀಕ್ ಪದಗಳನ್ನು ಬಳಸಿ ರೂಪಾಂತರಗಳಿಗೆ ನಾಮಕರಣ ಮಾಡಿದೆ.
ಇದನ್ನೂ ಓದಿ: ಡೆಲ್ಟಾ ರೂಪಾಂತರಿ ವಿರುದ್ಧ ಫೈಝರ್ ಲಸಿಕೆ ಕಡಿಮೆ ಪ್ರತಿಕಾಯ ಉತ್ಪಾದಿಸುತ್ತದೆ: ಲ್ಯಾನ್ಸೆಟ್ ವರದಿ
ಶ್ರೀಲಂಕಾದ ವಿವಿಧ ಜಿಲ್ಲೆಗಳ 80 ಜನರಲ್ಲಿ ಅಲ್ಫಾ ವೇರಿಯಂಟ್ ಕಂಡು ಬಂದಿದ್ದು, ಓರ್ವ ವ್ಯಕ್ತಿಗೆ ಡೆಲ್ಟಾ ರೂಪಾಂತರ ಅಂಟಿರುವುದು ದೃಢವಾಗಿದೆ. ವಿಶೇಷವೆಂದರೆ, ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದ ಕೆಲ ಆರೋಗ್ಯ ಕಾರ್ಯಕರ್ತರಲ್ಲೂ ಅಲ್ಫಾ ರೂಪಾಂತರ ಪತ್ತೆಯಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ದ್ವೀಪ ರಾಷ್ಟ್ರದಲ್ಲಿ ಏಪ್ರಿಲ್ನಿಂದ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, ಈವರೆಗೆ 2.16 ಲಕ್ಷ ಜನರಿಗೆ ವೈರಸ್ ಅಂಟಿದೆ. 1,910 ಮಂದಿ ಸಾವನ್ನಪ್ಪಿದ್ದಾರೆ.