ಜಕಾರ್ತ :ಇಂಡೋನೇಷ್ಯಾದ ಆಚೆ ಪ್ರಾಂತ್ಯದ ಕಡಲತೀರದಲ್ಲಿ ಸೋಮವಾರ ಸುಮಾರು 300 ರೋಹಿಂಗ್ಯಾ ಮುಸ್ಲಿಮರು ಪತ್ತೆಯಾಗಿದ್ದಾರೆ. ಅವರನ್ನು ಮಿಲಿಟರಿ, ಪೊಲೀಸ್ ಮತ್ತು ರೆಡ್‌ಕ್ರಾಸ್ ಸ್ವಯಂಸೇವಕರು ಸ್ಥಳಾಂತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೋಹಿಂಗ್ಯಾಗಳು ದೋಣಿಯೊಂದರ ಮೂಲಕ ಉಜೊಂಗ್ ಬ್ಲಾಂಗ್ ಬೀಚ್‌ಗೆ ಆಗಮಿಸಿದ್ದರು. ಬಳಿಕ ಮೂರು ಗುಂಪುಗಳಾಗಿ ಚದುರಿ ಹೋದರು. ಚದುರಿ ಹೋದವರನ್ನು ಸ್ಥಳೀಯರು ಮತ್ತು ಉಜೋಂಗ್ ಬ್ಲಾಂಗ್ ಗ್ರಾಮದ ಅಧಿಕಾರಿಗಳೊಂದಿಗೆ ಸೇರಿ ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬಂಡಾ ಶಕ್ತಿ ಉಪ ಜಿಲ್ಲಾ ಮಿಲಿಟರಿ ಕಮಾಂಡರ್ ರೋನಿ ಮಹೇಂದ್ರ ತಿಳಿಸಿದ್ದಾರೆ.
ದೋಣಿಯಲ್ಲಿ ಬಂದಿಳಿದವರಲ್ಲಿ 181 ಮಹಿಳೆಯರು, 100 ಪುರುಷರು ಮತ್ತು 14 ಮಕ್ಕಳಿದ್ದರು. ಅವರಿಗೆ ಸ್ಥಳೀಯರು, ಪೊಲೀಸ್, ಮಿಲಿಟರಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯಿಂದ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜೂನ್‌ನಲ್ಲಿ ಕೂಡ ಇಂಡೋನೇಷ್ಯಾದ ಪಶ್ಚಿಮ ಪ್ರಾಂತ್ಯದ ಆಚೆಹ್‌ನಲ್ಲಿ ಹಸಿದು ಕಂಗಾಲಾಗಿ ಮರದ ದೋಣಿಯಲ್ಲಿ ಸಾಗುತ್ತಿದ್ದ 94 ರೋಹಿಂಗ್ಯಾಗಳನ್ನು ಮೀನುಗಾರರು ಪತ್ತೆ ಹಚ್ಚಿದ್ದರು.
ಬೀಚ್ನಲ್ಲಿ ಪತ್ತೆಯಾದ ರೋಹಿಂಗ್ಯಾಗಳು ಮಿಲಿಟರಿ ದೌರ್ಜನ್ಯದಿಂದಾಗಿ ಲಕ್ಷಾಂತರ ರೋಹಿಂಗ್ಯಾ ಮುಸ್ಲಿಮರು ಬೌದ್ಧ ಬಹುಸಂಖ್ಯಾತ ಮ್ಯಾನ್ಮಾರ್‌ನಿಂದ ಪಲಾಯನ ಮಾಡಿದ್ದಾರೆ ಮತ್ತು ಅನೇಕರು ಬಾಂಗ್ಲಾದೇಶದ ಜನನಿಬಿಡ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಕಿರುಕುಳ ಮತ್ತು ಬಾಂಗ್ಲಾದೇಶದ ಶಿಬಿರಗಳಲ್ಲಿನ ಕಷ್ಟಗಳಿಂದ ಪಾರಾಗಿ ಹೆಚ್ಚಿನ ಸಂಖ್ಯೆಯ ರೋಹಿಂಗ್ಯಾಗಳು ಸಮುದ್ರದ ಮೂಲಕ ತೆರಳಿದ್ದಾರೆ.
ವಿದೇಶದಲ್ಲಿ ಉತ್ತಮ ಜೀವನದ ಭರವಸೆ ನೀಡಿ ಮಾನವ ಕಳ್ಳ ಸಾಗಾಣಿಕೆದಾರರು ಇವರನ್ನು ಅಪಹರಿಸುತ್ತಿದ್ದಾರೆ ಎಂದು ಮಾನವ ಹಕ್ಕು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.