ಕಾಬೂಲ್:ಅಫ್ಘಾನ್ ವಾಯುಪಡೆಯು ಗುರುವಾರ ದಕ್ಷಿಣ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೆಲೆಗಳ ಮೇಲೆ ವಾಯುದಾಳಿ ಮುಂದುವರೆಸಿದೆ. ದಕ್ಷಿಣ ಹೆಲ್ಮಂಡ್ ಪ್ರಾಂತ್ಯವನ್ನು ಒಳಗೊಂಡಂತೆ ದೇಶಾದ್ಯಂತ ವಾಯುದಾಳಿಗಳನ್ನು ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ತಿಳಿಸಿದೆ.
ಈಗಾಗಲೇ ತಾಲಿಬಾನ್ ನಿಯಂತ್ರಣದಲ್ಲಿರುವ ಸರ್ಕಾರಿ ರೇಡಿಯೋ ಮತ್ತು ದೂರದರ್ಶನ ಕೇಂದ್ರದ ಬಳಿ ಭಾರಿ ಬಾಂಬ್ ಸ್ಫೋಟ ಮಾಡಲಾಗಿದೆ ಎಂದು ಲಷ್ಕರ್ ಗಾಹ್ ನಿವಾಸಿಗಳು ತಿಳಿಸಿದ್ದಾರೆ. ಇಲ್ಲಿ ಹಲವಾರು ಮದುವೆ ಸಭಾಂಗಣಗಳು ಮತ್ತು ಪ್ರಾಂತೀಯ ರಾಜ್ಯಪಾಲರ ಅತಿಥಿಗೃಹ ಇವೆ ಎಂಬುದಾಗಿ ತಿಳಿದು ಬಂದಿದೆ.
ಉತ್ತರ ಅಫ್ಘಾನಿಸ್ತಾನದಲ್ಲಿ, ತಾಲಿಬಾನ್ ತನ್ನ ಕೌನ್ಸಿಲ್‌ನ ಮುಖ್ಯಸ್ಥ ಸರ್-ಇ-ಪುಲ್‌ನ ಬಹುತೇಕ ಪ್ರಾಂತೀಯ ರಾಜಧಾನಿಯ ಮೇಲೆ ಹಿಡಿತ ಸಾಧಿಸಿದೆ ಎಂದು ಮೊಹಮ್ಮದ್ ನೂರ್ ರಹ್ಮಾನಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಗುಂಪು ಉತ್ತರದ ಹಲವು ಪ್ರಾಂತ್ಯಗಳಲ್ಲಿ ಹತ್ತಾರು ಜಿಲ್ಲೆಗಳ ಮೇಲೆ ನಿಯಂತ್ರಣ ಸಾಧಿಸಿದೆ.
ಕಳೆದ ಹಲವು ದಿನಗಳಿಂದಲೂ ಕಂದ್‌ಹಾರನ ಹಲವು ಪ್ರದೇಶಗಳ ಮೇಲೆ ತಾಲಿಬಾನ್ ಉಗ್ರರು ನಿರಂತರ ದಾಳಿ ಕೈಗೊಂಡಿದ್ದಾರೆ. ಅಮೆರಿಕ ಆಫ್ಘಾನಿಸ್ತಾನದಲ್ಲಿ ನಿಯೋಜಿಸಿದ್ದ ತನ್ನ ಸೇನಾಪಡೆಯನ್ನು ಹಿಂದಕ್ಕೆ ಪಡೆದ ನಂತರ ತಾಲಿಬಾನ್ ಉಗ್ರರು ಪದೇ ಪದೆ ದಾಳಿ ನಡೆಸುವುದನ್ನು ಮುಂದುವರಿಸಿದ್ದಾರೆ. ಇದುವರೆಗೂ ತಾಲಿಬಾನ್ ಉಗ್ರರು ಹಾಗೂ ಭದ್ರತಾಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಅನೇಕ ಪ್ರದೇಶಗಳಿಗೆ ಹಾನಿ ಮಾಡಿರುವುದಲ್ಲದೇ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ.
ನಿರಂತರ ತಾಲಿಬಾನ್ ಉಗ್ರರ ದಾಳಿಯಿಂದ ಎಚ್ಚೆತ್ತುಗೊಂಡ ಆಫ್ಘಾನ್ ವಿಮಾನ ನಿಲ್ದಾಣ ಸೇರಿದಂತೆ ಉಗ್ರರು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವ ಅನೇಕ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಆಫ್ಘಾನ್ ವಾಣಿಜ್ಯ ಪ್ರದೇಶವಾಗಿರುವ ಕಂದಹಾರ್ ಮೇಲೆಯೇ ಉಗ್ರರು ಪದೇ ಪದೆ ದಾಳಿ ನಡೆಸಿ, ಆಫ್ಘಾನ್ ಪ್ರಮುಖ ಪ್ರದೇಶಗಳನ್ನು ವಶಕ್ಕೆ ಪಡೆಯಲು ನಿರಂತರವಾಗಿ ಪ್ರಯತ್ನ ಮುಂದುವರಿಸಿದ್ದಾರೆ.
ಓದಿ:ಮಾಧ್ಯಮ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿದ ರಷ್ಯಾ: ಸರ್ಕಾರದ ವಿರುದ್ಧದ ಧ್ವನಿ ಅಡಗಿಸುವ ತಂತ್ರ?