ಕರ್ನಾಟಕ

karnataka

ETV Bharat / international

ತಾಲಿಬಾನ್​ ರಣಕೇಕೆಗೆ ನಲುಗಿದ ಆಫ್ಘನ್... ಅಲ್ಲಿನ ಒಟ್ಟಾರೆ ಪರಿಸ್ಥಿತಿ ಚಿತ್ರಣ ಹೀಗಿದೆ!

ಆಫ್ಘನ್​ ಅನ್ನು ತಾಲಿಬಾನ್​​​ ವಶಪಡಿಸಿಕೊಂಡ ನಂತರ ಅಲ್ಲಿನ ಜನರ ಪರಿಸ್ಥಿತಿ ಹೇಳತೀರದ್ದಾಗಿದೆ. ಕಾಬೂಲ್​ ವಶಕ್ಕೆ ಪಡೆದ ಅಂದಿನಿಂದ ಈವರೆಗೆ ಏನೆಲ್ಲಾ ನಡೀತು ಅನ್ನೋದರ ಒಂದು ವರದಿ ಇಲ್ಲಿದೆ.

ತಾಲಿಬಾನ್​ ರಣಕೇಕೆಗೆ ನಲುಗಿದ ಆಫ್ಘನ್
ತಾಲಿಬಾನ್​ ರಣಕೇಕೆಗೆ ನಲುಗಿದ ಆಫ್ಘನ್

By

Published : Aug 19, 2021, 7:14 PM IST

ಕಾಬೂಲ್ (ಅಫ್ಘಾನಿಸ್ತಾನ): ಆಗಸ್ಟ್​​ 15, ಅಫ್ಘಾನಿಸ್ತಾನದ ಪ್ರಜೆಗಳಿಗೆ ಕರಾಳ ದಿನ. ಕಳೆದ 20 ವರ್ಷಗಳಿಂದ ನೆಮ್ಮದಿಯಾಗಿ ಜೀವಿಸುತ್ತಿದ್ದವರನ್ನು ಮತ್ತೆ ಮೃತ್ಯಕೂಪಕ್ಕೆ ತಳ್ಳಿದ ದಿನ. ಕಳೆದೊಂದು ವಾರದ ತಾಲಿಬಾನಿಗಳ ಹಿಂಸಾಚಾರಕ್ಕೆ ದೇಶದ ಜನತೆ ಸಂಪೂರ್ಣ ನಲುಗಿಹೋಗಿದ್ದಾರೆ

ಹೌದು, ಕಳೆದ ಎರಡು - ಮೂರು ತಿಂಗಳಿಂದ ಅಫ್ಘಾನಿಸ್ತಾನದ ಪ್ರಮುಖ ನಗರ, ಗ್ರಾಮೀಣ ಪ್ರದೇಶಗಳನ್ನು ಹಂತ ಹಂತವಾಗಿ ವಶಪಡಿಸಿಕೊಳ್ಳುತ್ತಿದ್ದ ತಾಲಿಬಾನ್, ಆಗಸ್ಟ್ 15 ರಂದು ರಾಜಧಾನಿ ಕಾಬೂಲ್​ನನ್ನು ಆಕ್ರಮಿಸಿ, ದೇಶದಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿದೆ.

ತಾಲಿಬಾನ್​ ತೆಕ್ಕೆಗೆ ಆಫ್ಘನ್​ - ಅಧ್ಯಕ್ಷ ಅಶ್ರಫ್ ಘನಿ ಪಲಾಯನ

ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಕೈ ವಶ ಮಾಡಿಕೊಂಡ ಬಳಿಕ ಅಧ್ಯಕ್ಷರಾಗಿದ್ದ ಅಶ್ರಫ್​ ಘನಿ, ತಾಲಿಬಾನ್​ಗೆ ಶರಣಾಗಿ ಅಧಿಕಾರ ತ್ಯಜಿಸಿದರು. ಬಳಿಕ, ತನ್ನ ಪ್ರಜೆಗಳ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೇ ದೇಶ ತೊರೆದಿದ್ದರು. ಅವರು ಸದ್ಯ ಯುಎಇನಲ್ಲಿ ವಾಸ್ತವ್ಯ ಹೂಡಿದ್ದಾರೆ. ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು ಪೂರ್ತಿ ವಿವರ ತಿಳಿಯದೇ ಯಾರೂ ಕೂಡ ನಿರ್ಧಾರಕ್ಕೆ ಬರಬಾರದು. ನಾನು ಅಫ್ಘಾನಿಸ್ತಾನದಲ್ಲಿ ಮತ್ತಷ್ಟು ರಕ್ತಪಾತವನ್ನು ನಿಲ್ಲಿಸುವ ಸಲುವಾಗಿ ಪಲಾಯನ ಮಾಡಬೇಕಾಗಿ ಬಂತು ಎಂದು ಸ್ಪಷ್ಟನೆ ನೀಡಿದ್ದಾರೆ.

ಆಫ್ಘನ್​ ಸಂಸತ್ತಲ್ಲೂ ತಾಲಿಬಾನ್​ ಕಾರುಬಾರು

ಉಗ್ರಪಡೆ, ಕಾಬೂಲ್​​ನಲ್ಲಿದ್ದ ಎಲ್ಲಾ ಸರ್ಕಾರಿ ಸಂಸ್ಥೆ, ಮಿಲಿಟರಿಗಳನ್ನು ವಶಪಡಿಸಿಕೊಂಡಿದ್ದು, ಸರ್ಕಾರಿ ಕಚೇರಿಗಳ ಮೇಲೆ ತಮ್ಮ ಬಾವುಟ ನೆಟ್ಟಿದ್ದಾರೆ.

ಸೇನೆ ಹಿಂತೆಗೆದುಕೊಂಡ ಅಮೆರಿಕ, ಬೈಡನ್ ಸಮರ್ಥನೆ

ಅಫ್ಘಾನಿಸ್ತಾನದಿಂದ ಸೈನ್ಯ ಹಿಂತೆಗೆದುಕೊಂಡಿದ್ದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದು, ಈಗಿನ ಪರಿಸ್ಥಿತಿಗೆ ಅಲ್ಲಿನ ನಾಯಕರೇ ಹೊಣೆ ಎಂದು ಆರೋಪಿಸಿದ್ದಾರೆ. ನಾವು ಇಂಥ ಪರಿಸ್ಥಿತಿಯನ್ನು ನಿರೀಕ್ಷಿಸಿದ್ದೆವು. ಆದರೆ, ಆ ಪರಿಸ್ಥಿತಿ ಇಷ್ಟು ಬೇಗ ಬರುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆಫ್ಘನ್​ಗೆ ಅಮೆರಿಕದ ಸೇನೆ ತೆರಳಿದ್ದು, ಆ ರಾಷ್ಟ್ರವನ್ನು ಕಟ್ಟುವ ಕೆಲಸಕ್ಕೆ ಅಲ್ಲ ಎಂದಿರುವ ಬೈಡನ್, ಸೇನೆ ಅಲ್ಲಿಂದ ವಾಪಸ್​ ಆದರೂ ಭಯೋತ್ಪಾದನೆಯ ವಿರುದ್ಧದ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ. ​

ಉಗ್ರರಿಗೆ ಬೆದರಿ ದೇಶ ತೊರೆಯುತ್ತಿರುವ ಜನ

ತಾಲಿಬಾನ್ ಎಂಟ್ರಿಯಾಗುತ್ತಿದ್ದಂತೆ ಬೆದರಿದ ಜನ ಊರುಗಳನ್ನು ತೊರೆಯುತ್ತಿದ್ದು ಬಸ್​ಗಳನ್ನು ಏರಿದಂತೆ, ವಿಮಾನಗಳನ್ನು ಏರುತ್ತಿದ್ದಾರೆ. ಉಗ್ರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅಮೆರಿಕಕ್ಕೆ ತೆರಳಿದ ವಿಮಾನವೊಂದರಲ್ಲಿ ಅಂದಾಜು 650 ಕ್ಕೂ ಹೆಚ್ಚು ಜನರು ಪ್ರಯಾಣಿಸಿದ್ದರು. ಕಾಬೂಲ್​ ವಿಮಾನ ನಿಲ್ದಾಣದಲ್ಲಿಯೇ ಸಾವಿರಾರು ಜನರು ಜಮಾವಣೆಗೊಂಡಿದ್ದಾರೆ.

ಅಲ್ಲದೆ, ವಿಮಾನ ನಿಲ್ದಾಣ ಪ್ರವೇಶಿಸದಂತೆ ಮುಳ್ಳುತಂತಿ ಹಾಕಲಾಗಿದೆ. ನಮ್ಮನ್ನು ವಿಮಾನ ನಿಲ್ದಾಣದ ಒಳಗೆ ಹೋಗಲು ಬಿಡಿ ಎಂದು ಸೈನಿಕರ ಬಳಿ ಆಫ್ಘನ್ನರು ಮನವಿ ಮಾಡಿಕೊಳ್ಳುತ್ತಿದ್ದಾರೆ.

‘ಲೈಂಗಿಕ ಗುಲಾಮಗಿರಿಯಲ್ಲಿ ಹೆಣ್ಣುಮಕ್ಕಳು’

ಇತ್ತೀಚಿನ ದಿನಗಳಲ್ಲಿ ತಾಲಿಬಾನ್​ ಕೈಗೊಳ್ಳುತ್ತಿರುವ ನಿರ್ಧಾರವು, ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಗೆ ತಳ್ಳುವ ಉದ್ದೇಶಗಳನ್ನು ಹೊಂದಿದೆ. ಜತೆಗೆ 12 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಲಾಗಿದ್ದು, ಉದ್ಯೋಗದ ಹಕ್ಕನ್ನೂ ಕಸಿದುಕೊಳ್ಳಲಾಗಿದೆ. ಪುರುಷರ ರಕ್ಷಣೆಯಿಲ್ಲದೇ, ಮಹಿಳೆಯರು ಹೊರ ಹೋದರೆ ಅವರನ್ನು ಥಳಿಸಿ ಕೊಲ್ಲಲಾಗುತ್ತದೆ.

ಗುಂಡಿನ ದಾಳಿಗೆ 40 ಕ್ಕೂ ಹೆಚ್ಚು ಜನರು ಬಲಿ

ಕಾಬೂಲ್ ವಿಮಾನ ನಿಲ್ದಾಣದಲ್ಲಾದ ಗುಂಡಿನ ದಾಳಿಯಲ್ಲಿ ಸೋಮವಾರದಿಂದ ಈವರೆಗೆ 40 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಕಮಾಂಡರ್ ತಿಳಿಸಿದ್ದಾರೆ. ವಿದೇಶ ಪ್ರವಾಸದ ಬಗ್ಗೆ ಹರಡುತ್ತಿರುವ ಸುಳ್ಳು ವದಂತಿಗಳಿಂದ ಜನರು ಮೋಸ ಹೋಗಬಾರದು. ಜನರು ವಿಮಾನ ನಿಲ್ದಾಣಕ್ಕೆ ಬರುವುದನ್ನು ನಿಲ್ಲಿಸಬೇಕಾಗಿ ಕೇಳಿಕೊಂಡಿದ್ದಾರೆಂದು ಆಫ್ಘನ್​ ಮಾಧ್ಯಮ ವರದಿ ಮಾಡಿದೆ.

ನಾನೇ ಅಧ್ಯಕ್ಷ ಎಂದಿದ್ದ ಮಾಜಿ ಉಪಾಧ್ಯಕ್ಷನ ಟ್ವಿಟರ್ ಸಸ್ಪೆಂಡ್

ಯಾವುದೇ ಕಾರಣಕ್ಕೂ ತಾಲಿಬಾನ್​ಗೆ ಶರಣಾಗಲ್ಲ. ನಾನೇ ಆಫ್ಘನ್ ಅಧ್ಯಕ್ಷ ಎಂದು ಹೇಳಿಕೆ ನೀಡಿದ್ದ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅಧಿಕೃತ ಟ್ವಿಟರ್​ ಖಾತೆಯನ್ನು ಟ್ವಿಟರ್​ ಸಂಸ್ಥೆ ಅಮಾನತುಗೊಳಿಸಿದೆ. ಅವರು ಕಳೆದ ಎರಡು ತಿಂಗಳ ಹಿಂದೆಯಷ್ಟೇ, ನಾನು ಪ್ರಸ್ತುತ ನನ್ನ ದೇಶದೊಳಗಿದ್ದೇನೆ. ನಾನೇ ದೇಶದ ಹಂಗಾಮಿ ಅಧ್ಯಕ್ಷ. ನಾನು ವಿಶ್ವದ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಅಫ್ಘಾನಿಸ್ತಾನದ ರಕ್ಷಣೆಗೆ ಬದ್ಧವಾಗಿದ್ದೇನೆ" ಎಂದು ಹೇಳಿದ್ದರು.

ಅಮೆರಿಕಕ್ಕೆ ಮುಜುಗರ

ತಾಲಿಬಾನ್​ ಉಗ್ರಪಡೆ ಆಫ್ಘನ್​​​ ಸೇನೆಯಿಂದ ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ಹಿಡಿದು, ಅಮೆರಿಕ ಸೇನೆಯ ಸಮವಸ್ತ್ರ ಧರಿಸಿ ತಿರುಗಾಡುತ್ತಿರುವುದು ಅಮೆರಿಕಕ್ಕೆ ಮುಜುಗರವನ್ನುಂಟು ಮಾಡಿದೆ.

ಇದನ್ನೂ ಓದಿ: ತಾಲಿಬಾನರ ಮೈ ಮೇಲೆ ಅಮೆರಿಕಾ ಸೇನೆಯ ಸಮವಸ್ತ್ರ..​ಕೈಯಲ್ಲಿ ಶಸ್ತ್ರಾಸ್ತ್ರ: ವಿಶ್ವದ ದೊಡ್ಡಣ್ಣನಿಗೆ ಮುಜುಗರ

ABOUT THE AUTHOR

...view details