ಕರ್ನಾಟಕ

karnataka

'ದಯವಿಟ್ಟು ನಮಗೆ ಸಹಾಯ ಮಾಡಿ, ನಮ್ಮ ಜೀವ ಅಪಾಯದಲ್ಲಿದೆ': ಸುದ್ದಿ ನಿರೂಪಕಿಯ ಮನವಿ

By

Published : Aug 20, 2021, 11:00 AM IST

ತಾಲಿಬಾನ್ ದೇಶದ ಮೇಲೆ ಹಿಡಿತ ಸಾಧಿಸಿದ ನಂತರ ನನ್ನನ್ನು ಟಿವಿ ಸ್ಟೇಷನ್​ನಲ್ಲಿ ಕೆಲಸ ಮಾಡದಂತೆ ನಿರ್ಬಂಧಿಸಿದೆ ಎಂದು ಪ್ರಸಿದ್ಧ ಸುದ್ದಿ ನಿರೂಪಕಿ ಶಬ್ನಮ್ ದವ್ರನ್ ಬೇಸರ ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಅವರು, 'ನಮ್ಮ ಜೀವಕ್ಕೆ ಅಪಾಯವಿದೆ' ಎಂದು ಹೇಳಿದ್ದಾರೆ.

News Anchor Barred
ಶಬ್ನಮ್ ದವ್ರನ್

ಕಾಬೂಲ್:ಅಫ್ಘಾನಿಸ್ತಾನವನ್ನು ತಾಲಿಬಾನ್ ರಕ್ಕಸರು​ ತಮ್ಮ ಕೈವಶ ಮಾಡಿಕೊಂಡ ಬಳಿಕ ಅಲ್ಲಿನ ಮಹಿಳೆಯರಿಗಿದ್ದ ಹಕ್ಕುಗಳು ಮಾಯವಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಅಲ್ಲಿನ ಸರ್ಕಾರಿ ವಾಹಿನಿಯ ಪ್ರಮುಖ ಸುದ್ದಿ ನಿರೂಪಕಿ ಖಾದಿಜಾ ಅಮೀನ್​ ಎಂಬವರನ್ನು ಉಗ್ರರು ಕೆಲಸದಿಂದ ಅಮಾನತು ಮಾಡಿದ್ದರು. ಇದೀಗ ಇನ್ನೋರ್ವ ನಿರೂಪಕಿಯನ್ನೂ ಸಹ ಕೆಲಸದಿಂದ ತೆಗೆದು ಹಾಕಿದ್ದಾರೆ.

'ತಾಲಿಬಾನ್ ದೇಶದ ಮೇಲೆ ಹಿಡಿತ ಸಾಧಿಸಿದ ನಂತರ ನನ್ನನ್ನು ಟಿವಿ ಸ್ಟೇಷನ್​ನಲ್ಲಿ ಕೆಲಸ ಮಾಡದಂತೆ ನಿರ್ಬಂಧಿಸಿದೆ' ಎಂದು ಪ್ರಸಿದ್ಧ ಸುದ್ದಿ ನಿರೂಪಕಿ ಶಬ್ನಮ್ ದವ್ರನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದು, 'ನಮ್ಮ ಜೀವಕ್ಕೆ ಅಪಾಯವಿದೆ' ಎಂದು ತಿಳಿಸಿದ್ದಾರೆ.

1996 ರಿಂದ 2001ರವರೆಗೆ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ಹೊರಗಿಡಲಾಗಿತ್ತು. ಅಷ್ಟೇ ಅಲ್ಲದೆ, ಅಲ್ಲಿನ ಮಹಿಳೆಯರನ್ನು ಕಂಡರೆ ಗುಂಡಿಕ್ಕಿ ಅಥವಾ ಕಲ್ಲಿನಿಂದ ಹೊಡೆದು ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಲಾಗುತ್ತಿತ್ತು. ಅದಾದ ಬಳಿಕ ಆಗಸ್ಟ್​ 15ರಂದು ಅಘ್ಘಾನಿಸ್ತಾನವನ್ನು ತಾಲಿಬಾನ್​ಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಕ್ರೌರ್ಯ ಮೆರೆಯುತ್ತಿದ್ದಾರೆ. ಅಧಿಕಾರಕ್ಕೆ ಬಂದ ಆರಂಭದಲ್ಲಿ ಮಹಿಳೆಯರ ಹಕ್ಕುಗಳನ್ನು ಗೌರವಿಸುತ್ತೇವೆ, ಕಾಪಾಡುತ್ತೇವೆ ಎಂದು ಪೊಳ್ಳು ಭರವಸೆಗಳನ್ನು ನೀಡುತ್ತಿದ್ದ ತಾಲಿಬಾನಿಗಳು ಇದೀಗ ತಮ್ಮ ನಿಜರೂಪವನ್ನು ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಹಕ್ಕು ಗೌರವಿಸುವ ಹೇಳಿಕೆ ಬೆನ್ನಲ್ಲೇ ಸರ್ಕಾರದ ನ್ಯೂಸ್ ಚಾನೆಲ್​​ನ ಮಹಿಳಾ ಉದ್ಯೋಗಿ ಅಮಾನತುಗೊಳಿಸಿದ ತಾಲಿಬಾನ್

'ವ್ಯವಸ್ಥೆಯ ಬದಲಾವಣೆಯ ನಂತರವೂ ನಾನು ಕೆಲಸಕ್ಕೆ ತೆರಳಿದ್ದೆ. ಆಗ ನನ್ನ ಆಫೀಸ್​ ಕಾರ್ಡ್​ ತೋರಿಸಿದರೂ ಹೋಗಲು ಅವಕಾಶ ಕೊಡಲಿಲ್ಲ. ಆದರೆ ಆಫೀಸ್ ಕಾರ್ಡ್ ಹೊಂದಿರುವ ಪುರುಷ ಉದ್ಯೋಗಿಗಳಿಗೆ ಅನುಮತಿ ನೀಡಲಾಯಿತು' ಎಂದು ಅವರು ವಿಡಿಯೋದಲ್ಲಿ ಹೇಳುತ್ತಾರೆ.

'ಆಡಳಿತ ಬದಲಾಗಿದೆ. ನಿಮಗೆ ಇಲ್ಲಿ ಪ್ರವೇಶವಿಲ್ಲ. ನೀನು ಮನೆಗೆ ಹೋಗು ಹುಡುಗಿ' ಎಂದು ತಾಲಿಬಾನಿಗಳು ಹೇಳಿದ್ದಾರಂತೆ. ಅಷ್ಟೇ ಅಲ್ಲದೆ, ಈ ಘಟನೆಯಿಂದ ಮನನೊಂದ ಶಬ್ನಮ್​, 'ನನ್ನ ಮಾತನ್ನು ಕೇಳುವವರು ಇದ್ದರೆ, ದಯವಿಟ್ಟು ನಮಗೆ ಸಹಾಯ ಮಾಡಿ, ನಮ್ಮ ಜೀವಕ್ಕೆ ಅಪಾಯವಿದೆ' ಎಂದು ಕಳಕಳಿಯಿಂದ ಮನವಿ ಮಾಡಿದ್ದಾರೆ.

ABOUT THE AUTHOR

...view details