ನವದೆಹಲಿ: ಅತ್ಯಂತ ಕಠೋರ ನಿಯಮಗಳನ್ನು ತಾಳುತ್ತಿರುವ ಕಟ್ಟರ್ ಇಸ್ಲಾಮಿಸ್ಟ್ ತಾಲಿಬಾನ್ ಗುಂಪು ಹೆಣ್ಣುಮಕ್ಕಳು ಶಾಲಾ-ಕಾಲೇಜುಗಳಿಗೆ ತೆರಳುವಾಗ ಧರಿಸುವ ಬಟ್ಟೆಗಳ ಮೇಲೆ ಕಠಿಣ ನಿಯಮಗಳನ್ನು ಹೇರುತ್ತಿದ್ದಾರೆ. ಶಾಲೆಗಳಲ್ಲಿ ಹೆಣ್ಣುಮಕ್ಕಳು ಯಾವ ರೀತಿಯಲ್ಲಿ ಕುಳಿತುಕೊಳ್ಳಬೇಕು, ಅವರಿಗೆ ಯಾರು ಬೋಧಿಸಬೇಕು, ಶಾಲಾ ತರಗತಿಗಳ ವಿಸ್ತೀರ್ಣವನ್ನೂ ಅವರು ನಿಗದಿಪಡಿಸಿದ್ದಾರೆ.
ಆಮಾಜ್ ನ್ಯೂಸ್ ಏಜೆನ್ಸಿಯ ಫೋಟೋಗ್ರಾಫರ್ ಸೆರೆಹಿಡಿದ ಈ ಕಾಲೇಜು ತರಗತಿಯ ಚಿತ್ರವನ್ನೊಮ್ಮೆ ನೋಡಿ. ಇಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಬೇರ್ಪಡಿಸಲು ಪ್ರತ್ಯೇಕ ಕರ್ಟನ್(ಬಟ್ಟೆ) ಹಾಕಲಾಗಿದೆ. ಇದು ತಾಲಿಬಾನ್ ಕಪಿಮುಷ್ಠಿಯಲ್ಲಿ 'ಎಲ್ಲವೂ ಸರಿಯಾಗಿರುವ' ವ್ಯವಸ್ಥೆಗೆ ಹಿಡಿದಿರುವ ಕೈಗನ್ನಡಿ.
ಕಳೆದ ಶನಿವಾರ ತಾಲಿಬಾನ್ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ತರಗತಿಗಳು ಆರಂಭವಾಗುವುದಕ್ಕೂ ಮುನ್ನ ಹೆಣ್ಣು ಮಕ್ಕಳು ಕಡ್ಡಾಯವಾಗಿ ನಿಕಾಬ್ (ಇದು ಮುಖವನ್ನು ಬಹುತೇಕ ಮುಚ್ಚುವ ವಸ್ತ್ರ) ಧರಿಸಬೇಕು. ಅದೇ ರೀತಿ, ಲಿಂಗಾಧಾರಿತವಾಗಿ ತರಗತಿಯನ್ನು ಕರ್ಟನ್ ಹಾಕುವ ಮೂಲಕ ಬೇರ್ಪಡಿಸಬೇಕು.
ಶಾಲಾ-ಕಾಲೇಜುಗಳಿಗೆ ತಾಲಿಬಾನ್ ವಿಧಿಸಿರುವ ಕಠಿಣ ನಿಯಮಗಳು ಹೀಗಿವೆ..
1. ಮಹಿಳೆಯರು/ಹೆಣ್ಣು ಮಕ್ಕಳು ಸಂಪೂರ್ಣವಾಗಿ ಬುರ್ಖಾ ಧರಿಸಬೇಕು ಎಂದು ತಿಳಿಸಿಲ್ಲ. ಆದರೆ ಕಣ್ಣುಗಳು ಮಾತ್ರ ಕಾಣಿಸುವಂತಿರುವ ನಿಕಾಬ್ ಕಡ್ಡಾಯವಾಗಿ ಧರಿಸಿರಬೇಕು.
2. ಲಿಂಗಾಧಾರಿತವಾಗಿ ಶಾಲಾ-ಕಾಲೇಜು ತರಗತಿಯನ್ನು ಕರ್ಟನ್ ಹಾಕುವ ಮೂಲಕ ಬೇರ್ಪಡಿಸಬೇಕು.
3. ಶಾಲೆಗಳಿಗೆ ಹಾಜರಾಗುವ ಹೆಣ್ಣುಮಕ್ಕಳಿಗೆ ಮಹಿಳಾ ಶಿಕ್ಷಕಿಯರು ಮಾತ್ರ ಬೋಧಿಸಬೇಕು. ಇದು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ 'ಸನ್ನಡತೆ ಹೊಂದಿರುವ ಪ್ರಾಯ ಆಗಿರುವ ವ್ಯಕ್ತಿ'ಯನ್ನು ಬಳಸಿಕೊಳ್ಳಬಹುದು. ವಿಶ್ವವಿದ್ಯಾಲಯಗಳು ಹೆಣ್ಣುಮಕ್ಕಳಿಗೆ ಪಾಠ ಹೇಳಲು ಮಹಿಳಾ ಬೋಧಕ ಸಿಬ್ಬಂದಿಯನ್ನೇ ನೇಮಿಸಿಕೊಳ್ಳಬೇಕು.