ಕಾಬೂಲ್ (ಅಫ್ಘಾನಿಸ್ತಾನ) : ದೇಶದ ಮಧ್ಯ ಪ್ರಾಂತ್ಯದ ಉರುಝ್ಗನ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಫ್ಘಾನ್ ಭದ್ರತಾ ಪಡೆಗಳು ತಾಲಿಬಾನ್ ಚಳವಳಿಯ 15 ಸದಸ್ಯರನ್ನು ಹತ್ಯೆ ಮಾಡಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಕಾರ್ಯಾಚರಣೆ ವೇಳೆ ಅಫ್ಘಾನ್ ಪಡೆಗಳು ತಾಲಿಬಾನ್ ಗುಂಪಿನ ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಒಂದು ವಾಹನ ಮತ್ತು ಎರಡು ಅಡಗುತಾಣಗಳನ್ನು ನಾಶಪಡಿಸಿವೆ ಎಂದು ಸಚಿವಾಲಯ ಹೇಳಿದೆ.
ನೈರುತ್ಯ ಪ್ರಾಂತ್ಯದ ಫರಾಹದ ಪಶ್ಹ್ತ್ರೋಡ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಅಫ್ಘಾನ್ ಪಡೆಗಳು ಎಂಟು ಬಂಡುಕೋರರನ್ನು ಕೊಂದಿದ್ದು, ಒಬ್ಬನಿಗೆ ಗಾಯಗಳಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಓದಿ : ಮ್ಯಾನ್ಮಾರ್ ಮಿಲಿಟರಿ ದಂಗೆ: ಜುಂಟಾ ನಿಯಮ ತಿರಸ್ಕಾರ.. ಟ್ವಿಟರ್, ಇನ್‌ಸ್ಟಾಗ್ರಾಂ ಸ್ಥಗಿತ
ಸೆಪ್ಟೆಂಬರ್‌ನಲ್ಲಿ ಖತಾರ್ ರಾಜಧಾನಿ ದೋಹಾದಲ್ಲಿ ಸರ್ಕಾರ ಮತ್ತು ತಾಲಿಬಾನ್ ನಡುವೆ ಶಾಂತಿ ಮಾತುಕತೆ ಪ್ರಾರಂಭವಾಗಿದ್ದರೂ, ಅಫ್ಘಾನ್ ಸಶಸ್ತ್ರ ಪಡೆಗಳು ಮತ್ತು ತಾಲಿಬಾನ್ ನಡುವೆ ದೇಶಾದ್ಯಂತ ಘರ್ಷಣೆಗಳು ನಡೆಯುತ್ತಿವೆ.
ಈ ಹಿಂದೆ ಅಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದಲ್ಲಿ ನಡೆದ ತಾಲಿಬಾನ್ ದಾಳಿಯಲ್ಲಿ ಇಬ್ಬರು ಅಫ್ಘಾನ್ ಸೈನಿಕರು ಮತ್ತು ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮಾಜಿ ನಿರ್ದೇಶಕ ಮೃತಪಟ್ಟಿದ್ದರು ಎಂದು ಪ್ರಾಂತೀಯ ಮಂಡಳಿಯ ಮೂಲವೊಂದು ಮಾಧ್ಯಮಗಳಿಗೆ ತಿಳಿಸಿದೆ.
ಮೂಲಗಳ ಪ್ರಕಾರ, ತಾಲಿಬಾನ್ ಶನಿವಾರ ರಾತ್ರಿ ಅಲಿಯಾಬಾದ್ ಜಿಲ್ಲೆಯ ಮಿಲಿಟರಿ ಚೆಕ್ಪಾಯಿಂಟ್ ಮೇಲೆ ದಾಳಿ ಮಾಡಿದೆ. ಕುಂಡುಜ್ ರಾಜ್ಯಪಾಲರ ಕಚೇರಿ ಈ ಘಟನೆಯನ್ನು ದೃಢಪಡಿಸಿದರೂ ಸಾವು-ನೋವುಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಭಾನುವಾರ ಬೆಳಗ್ಗೆ ನಂಗರ್ಹಾರ್ ಪ್ರಾಂತ್ಯದ ಖೋಗ್ಯಾನಿ ಜಿಲ್ಲೆಯ ಭದ್ರತಾ ಹೊರ ಠಾಣೆ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.