ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿರುವ ಹಿನ್ನೆಲೆಯಲ್ಲಿ ಅನೇಕರು ದೇಶ ತೊರೆಯಲು ಪ್ರಾರಂಭಿಸಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಕಡೆ ಜನಸಾಗರವೇ ಹರಿದುಬರುತ್ತಿದ್ದು, ನಮ್ಮನ್ನು ವಿಮಾನ ನಿಲ್ದಾಣದ ಒಳಗೆ ಹೋಗಲು ಬಿಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ವಿಮಾನ ನಿಲ್ದಾಣ ಪ್ರವೇಶಿಸದಂತೆ ಅಲ್ಲಿ ಮುಳ್ಳುತಂತಿ ಹಾಕಲಾಗಿದೆ. ಈ ಮುಳ್ಳು ತಂತಿಯ ಹಿಂದೆ ನಿಂತಿರುವ ಅಫ್ಘನ್ನರು, ನಮ್ಮನ್ನು ವಿಮಾನ ನಿಲ್ದಾಣದ ಒಳಗೆ ಹೋಗಲು ಬಿಡಿ ಎಂದು ಸೈನಿಕರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
'ನಮಗೆ ಸಹಾಯ ಮಾಡಿ, ತಾಲಿಬಾನಿಗಳು ನಮ್ಮನ್ನು ಸಾಯಿಸಲು ಬರುತ್ತಿದ್ದಾರೆ" ಎಂದು ಮಹಿಳೆಯೊಬ್ಬರು ಸೈನಿಕರಿಗೆ ಮಾನವಿ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ.
ದೂರದರ್ಶನ ನಿರೂಪಕಿಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾಯುತ್ತ ನಿಂತಿರುವ ಜನ ಪುಟ್ಟ ಮಗುವನ್ನು ಹತಾಶೆಯಿಂದ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಪಾಸ್ ಮಾಡುತ್ತಿದ್ದಾರೆ. ಇದು ಅಫ್ಘಾನಿಸ್ತಾನದ ಸ್ಥಿತಿ ಚಿಂತಾಜನಕ ಸ್ಥಿತಿಯನ್ನು ತೋರಿಸುತ್ತಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರ ರಚಿಸಲು ಮುಂದಾಗಿರುವುದರಿಂದ ಅಲ್ಲಿನ ಜನರು ಭಯಭೀತರಾಗಿದ್ದಾರೆ. ಹೇಗಾದರೂ ಮಾಡಿ ದೇಶಬಿಟ್ಟು ಬೇರೆದೇಶಕ್ಕೆ ಹೋಗಬೇಕೆಂದು ಹಾತೊರೆಯುತ್ತಿದ್ದಾರೆ. ಸದ್ಯ ಎಲ್ಲ ಭರವಸೆಗಳನ್ನು ಕಳೆದುಕೊಂಡು ಬೀದಿಗೆ ಬಂದಿರುವ ಅಫ್ಘಾನ್ ಜನತೆ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.