ಕಾಬೂಲ್: ಅಫ್ಘಾನಿಸ್ತಾನದ ದಕ್ಷಿಣ ಹೆಲ್ಮಾಂಡ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿಕೊಂಡು ಅಫ್ಘನ್ ಪಡೆ ವೈಮಾನಿಕ ದಾಳಿ ನಡೆಸಿದ್ದು, ಕೆಲವು ನಾಗರಿಕರು ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೇನಾ ನೆಲೆಯೊಳಗೆ ತಾಲಿಬಾನ್ ಉಗ್ರರು ನುಗ್ಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡುತ್ತಿರುವುದನ್ನು ಗಮನಿಸಿದ ಅಫ್ಘನ್ ವಾಯುಪಡೆ ವೈಮಾನಿಕ ದಾಳಿ ನಡೆಸಿದೆ. ಆದರೆ ಕೆಲ ಅಮಾಯಕ ಜನರೂ ದಾಳಿಯಲ್ಲಿ ಬಲಿಯಾಗಿದ್ದಾರೆ.
ಇದನ್ನೂ ಓದಿ: 24 ಗಂಟೆಯಲ್ಲಿ 100 ತಾಲಿಬಾನ್ ಉಗ್ರರ ಹತೈಗೈದ ಅಫ್ಘನ್ ಪಡೆ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಅಫ್ಘನ್ ಸೇನೆಯು ನಾಗರಿಕರ ಮೇಲೆಯೇ ವೈಮಾನಿಕ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಜೂನ್ 2ರಂದು ಅಫ್ಘಾನಿಸ್ತಾನದ ವಿವಿಧ ಪ್ರದೇಶಗಳಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಗಳಲ್ಲಿ 100ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು.
ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ದಾಳಿ, ಹಿಂಸಾಚಾರಗಳು ಹೆಚ್ಚಾಗಿದ್ದು, ಅಧಿಕೃತವಾಗಿ ಇದರ ಹೊಣೆಯನ್ನು ತಾಲಿಬಾನ್ ಹೊತ್ತಿಲ್ಲ. ಆದರೆ ಕೃತ್ಯಗಳ ಹಿಂದೆ ತಾಲಿಬಾನ್ ಕೈವಾಡವಿದೆ ಎಂದು ರಕ್ಷಣಾ ಸಚಿವಾಲಯ ಆರೋಪಿಸುತ್ತಾ ಬಂದಿದೆ.