ಜಕಾರ್ತ(ಇಂಡೋನೇಷ್ಯಾ):ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 10,000ಕ್ಕೂ ಹೆಚ್ಚು ಕಟ್ಟಡಗಳು, ಮನೆಗಳು ಧ್ವಂಸವಾಗಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಂಡೋನೇಷ್ಯಾದ ಪಸಮನ್ ಬರಾತ್ ಜಿಲ್ಲೆಯ ಈಶಾನ್ಯಕ್ಕೆ 17 ಕಿಲೋ ಮೀಟರ್ ದೂರದಲ್ಲಿ, ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2ರಷ್ಟು ದಾಖಲಾಗಿದ್ದು, 85 ಮಂದಿ ಗಾಯಗೊಂಡಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಮನೆಗಳನ್ನು ತೊರೆದಿದ್ದು ಸುಮಾರು 35 ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯ ಹಂಗಾಮಿ ವಕ್ತಾರ ಅಬ್ದುಲ್ ಮುಹಾರಿ ಈ ಕುರಿತು ಮಾಹಿತಿ ನೀಡಿದ್ದು, ಪಸಮಾನ್ ಬರಾತ್ ಜಿಲ್ಲೆಯಲ್ಲಿ ಮೂವರು ಮತ್ತು ಪಸಮಾನ್ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎಲ್ಲಾ 85 ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಎರಡೂ ಜಿಲ್ಲೆಗಳು ಭೂಕಂಪದಿಂದ ಹೆಚ್ಚು ಹಾನಿಗೆ ಒಳಗಾಗಿವೆ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.