ಟೆಹರಾನ್ :ಮಿಥೈಲ್ ಅಲ್ಕೋಹಾಲ್ ಕುಡಿದು 480ಕ್ಕೂ ಹೆಚ್ಚು ಜನ ಸತ್ತು, 2,850 ಜನ ಅಸ್ವಸ್ಥರಾಗಿರುವ ಘಟನೆ ಇರಾನ್ ದೇಶದಲ್ಲಿ ನಡೆದಿದೆ. ಕಟ್ಟರ್ ಇಸ್ಲಾಮಿಕ್ ದೇಶವಾಗಿರುವ ಇರಾನ್ನಲ್ಲಿ ಮದ್ಯ ಸೇವನೆ ಅಪರಾಧ. ಆದರೆ, ಮದ್ಯ ಸೇವಿಸುವುದರಿಂದ ಕೊರೊನಾ ವೈರಸ್ ಸೋಂಕು ತಗಲುವುದಿಲ್ಲ ಎಂದು ಸೋಶಿಯಲ್ ಮೀಡಿಯಾಗಳಲ್ಲಿನ ವೈರಲ್ ಸಂದೇಶಗಳನ್ನು ನೋಡಿದ ಜನ ಅಲ್ಕೋಹಾಲ್‌ನ ಹುಡುಕಿ ಕುಡಿಯುತ್ತಿದ್ದಾರೆ.
ಕೊರೊನಾಗೆ ಔಷಧಿ ಎಂದು ಸಾರಾಯಿ ಕುಡಿದು ಸತ್ತರು.. - 480 ಕ್ಕೂ ಹೆಚ್ಚು ಜನ ಸಾವು
ಕೊರೊನಾ ವೈರಸ್ ಅನ್ನು ಅಲ್ಕೊಹಾಲ್ ಕುಡಿಯುವುದರ ಮೂಲಕ ದೂರವಿಡಬಹುದು ಎಂಬ ನಂಬಿಕೆಯಿಂದ ಕಳ್ಳಭಟ್ಟಿ ಸಾರಾಯಿ ಕುಡಿದು 480 ಜನ ಮೃತಪಟ್ಟ ಘಟನೆ ಇರಾನ್ ದೇಶದಲ್ಲಿ ನಡೆದಿದೆ. ಇರಾನ್ನಲ್ಲಿ ಮದ್ಯ ಸೇವನೆ ಅಪರಾಧವಾಗಿರುವುದರಿಂದ ಕಳ್ಳಭಟ್ಟಿ ತಯಾರಿಕೆ ಹಾಗೂ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಆದರೆ ಕೊರೊನಾ ವೈರಸ್ಗಿಂತ ಹೆಚ್ಚು ಜನ ಕಳ್ಳಭಟ್ಟಿಗೆ ಬಲಿಯಾಗಿರುವುದು ವಿಪರ್ಯಾಸ.
ಸಾರಾಯಿ ನಿಷೇಧವಿರುವುದರಿಂದಾಗಿ ಇರಾನ್ನಲ್ಲಿ ಎಲ್ಲರೂಕಳ್ಳಭಟ್ಟಿ ಮೊರೆ ಹೋಗಿದ್ದಾರೆ.ಹೀಗೆ ಕುಡಿದ ಕಳ್ಳಭಟ್ಟಿಯು ಈಥೈಲ್ ಅಲ್ಕೋಹಾಲ್ ಆಗಿರದೆ ಮಿಥೈಲ್ ಅಲ್ಕೋಹಾಲ್ (ವಿಷಕಾರಿ) ಆಗಿದ್ದರಿಂದ ದೇಶಾದ್ಯಂತ ಭಾರಿ ಪ್ರಮಾಣದಲ್ಲಿ ಸಾವು ಸಂಭವಿಸಿವೆ. ಒಂದು ಕಡೆ ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾದ ವೈದ್ಯರಿಗೆ ಈಗ ಅಲ್ಕೋಹಾಲ್ನಿಂದ ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡುವುದು ಸವಾಲಾಗಿದೆ.
ಬ್ರಿಟಿಷ್ ಸ್ಕೂಲ್ ಟೀಚರ್ ಒಬ್ಬರು ವಿಸ್ಕಿ ಹಾಗೂ ಜೇನು ಬೆರೆಸಿ ಕುಡಿದಿದ್ದರಿಂದ ಅವರ ಕೊರೊನಾ ವೈರಸ್ ಸೋಂಕು ಮಾಯವಾಯಿತು ಎಂಬ ಸೋಶಿಯಲ್ ಮೀಡಿಯಾ ವೈರಲ್ ಸಂದೇಶವೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ.