ಕ್ವೆಟ್ಟಾ(ಪಾಕಿಸ್ತಾನ):ಇತ್ತೀಚೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪಾಕ್ ಸೇನೆ ಮತ್ತು ಭಯೋತ್ಪಾದಕರ ನಡುವಿನ ಕಾದಾಟ ತೀವ್ರಗೊಳ್ಳುತ್ತಿದೆ. ಈ ಬೆನ್ನಲ್ಲೇ ಬಲೂಚಿಸ್ತಾನ್ ಪ್ರಾಂತ್ಯದ ಬಲ್ಗತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಂಜ್ಗುರ್ ಮತ್ತು ನೌಶ್ಕಿ ಪ್ರದೇಶಗಳಲ್ಲಿ ಇತ್ತೀಚೆಗೆ ಪಾಕ್ ಸೇನೆಯ ಪೋಸ್ಟ್ಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು ಸಾಕಷ್ಟು ಸೈನಿಕರನ್ನು ಕೊಂದಿದ್ದರು. ಈ ಕಾರ್ಯಾಚರಣೆಯ ಭಾಗವಾಗಿ ದಾಳಿ ನಡೆಸಿರುವ ಪಾಕ್ ಸೇನೆಯ ಫ್ರಾಂಟಿಯರ್ ಕಾರ್ಪ್ಸ್ ಮನೆಯೊಂದರ ಮೇಲೆ ದಾಳಿ ನಡೆಸಿ, ಮೂವರು ಭಯೋತ್ಪಾದಕರನ್ನು ಕೊಂದಿದೆ.
ಅಧಿಕೃತ ಮೂಲಗಳು ನೀಡಿದ ಸುಳಿವಿನ ಆಧಾರದ ಮೇಲೆ ಬಲ್ಗತಾರ್ ಪ್ರದೇಶದಲ್ಲಿ ಭಯೋತ್ಪಾದಕರನ್ನು ಸುತ್ತುವರೆಯಲಾಗಿದ್ದು, ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಮಾಹಿತಿ ನೀಡಿದೆ.