ಟರ್ಕಿ: ವಿಶ್ವದ ಅತಿ ಎತ್ತರದ ಮಹಿಳೆ ಎಂಬ ಹೆಗ್ಗಳಿಕೆಗೆ ಟರ್ಕಿಯ ರುಮೈಸಾ ಗೆಲ್ಗಿ (Rumeysa Gelgi) ಪಾತ್ರರಾಗಿದ್ದಾರೆ. 24 ವರ್ಷದ ಈ ಮಹಿಳೆ 215.16 ಸೆಂ.ಮೀ (7 ಅಡಿ 0.7 ಇಂಚು) ಎತ್ತರವಿದ್ದು, ಎರಡನೇ ಬಾರಿ ದಾಖಲೆ ಬರೆದಿದ್ದಾರೆ.
2014 ರಲ್ಲಿ 18 ನೇ ವಯಸ್ಸಿನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಆಕೆಗೆ ಅತಿ ಎತ್ತರದ ಯುವತಿ ಎಂಬ ಬಿರುದು ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಶ್ರೀಮತಿ ರುಮೈಸಾ ಗೆಲ್ಗಿ ಗಿನ್ನಿಸ್ ದಾಖಲೆ ಮಾಡಿದ್ದು, ವಿಶ್ವದ ಅತಿ ಎತ್ತರದ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಇನ್ನು ಗೆಲ್ಗಿಯವರು ವೀವರ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಇದು ಅಸ್ಥಿಪಂಜರದ ಪಕ್ವತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಹಾಗಾಗಿ ರುಮೈಸಾ ನಡೆದಾಡಲು ಗಾಲಿಕುರ್ಚಿಯನ್ನು ಬಳಸುತ್ತಿದ್ದಾರೆ.
ಈ ಕುರಿತು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ, 'ವಿಭಿನ್ನವಾಗಿರುವುದು ಕೆಟ್ಟದ್ದಲ್ಲ, ನೀವು ಹಿಂದೆಂದೂ ಊಹಿಸದ್ದನ್ನು ಸಾಧಿಸಬಹುದು' ಎಂದು ಶೀರ್ಷಿಕೆಯಲ್ಲಿ ಬರೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಕಾಮೆಂಟ್ ಮೂಲಕ ಗೆಲ್ಗಿಯನ್ನು ಅಭಿನಂದಿಸಿದ್ದಾರೆ.