ಕರಾಚಿ(ಪಾಕಿಸ್ತಾನ): ಬಲೂಚಿಸ್ತಾನ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಗುರುವಾರ ನಡೆದ ಪ್ರಬಲ ಭೂಕಂಪದ ಕಾರಣಕ್ಕೆ ಕಲ್ಲಿದ್ದಲು ಗಣಿ ಮತ್ತು ಮನೆಗಳು ಕುಸಿದು ಸುಮಾರು 22 ಮಂದಿ ಸಾವನ್ನಪ್ಪಿ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕಂಪನದ ಕೇಂದ್ರಬಿಂದು ಹರ್ನೈ ಪ್ರದೇಶದಲ್ಲಿದ್ದು, ರಿಕ್ಟರ್ ಮಾಪಕದಲ್ಲಿ 5.9ರಷ್ಟು ತೀವ್ರತೆ ದಾಖಲಾಗಿದೆ. ಹರ್ನೈ ಪ್ರಾಂತ್ಯದಲ್ಲಿ ಕಲ್ಲಿದ್ದಲು ಗಣಿಗಳು ಹೇರಳವಾಗಿವೆ. ಭೂಕಂಪದಿಂದಾಗಿ ಗಣಿಗಳು ಕುಸಿದಿರುವುದೇ ಸಾವು-ನೋವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪ ಕೇವಲ ಹರ್ನೈ ಪ್ರಾಂತ್ಯದ ಮೇಲೆ ಮಾತ್ರವಲ್ಲದೇ, ಕ್ವೆಟ್ಟಾ, ಸಿಬಿ, ಪಿಶಿನ್, ಕಿಲಾ ಸೈಫುಲ್ಲಾ, ಚಮನ್, ಜಿಯಾರತ್ ಮತ್ತು ಝೋಬ್ ಪ್ರದೇಶಗಳ ಮೇಲೆಯೂ ಪರಿಣಾಮ ಬೀರಿದೆ. ಹೆಚ್ಚು ಮಂದಿ ಅಂದರೆ 13 ಮಂದಿ ಹರ್ನೈ ಜಿಲ್ಲೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಲ್ಲಿದ್ದಲು ಗಣಿಯಲ್ಲಿ ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿದ್ದು, ಇನ್ನುಳಿದವರು ಮನೆಗಳು ಕುಸಿದು ಅಥವಾ ಬೇರೆ ಕಾರಣದಿಂದ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಸಾವನ್ನಪ್ಪಿದ 22 ಮಂದಿಯಲ್ಲಿ 6 ಮಕ್ಕಳಿದ್ದಾರೆ. ಘಟನೆಯಿಂದ ಪಾಕಿಸ್ತಾನದ ಆರು ಜಿಲ್ಲೆಗಳು ತೀವ್ರ ನಷ್ಟಕ್ಕೊಳಗಾಗಿವೆ.
ಪಾಕಿಸ್ತಾನದ ಈ ಪ್ರದೇಶದಲ್ಲೇಕೆ ಹೆಚ್ಚು ಭೂಕಂಪನ?