ನವದೆಹಲಿ: ಭಾರತ-ಚೀನಾ ಸೇನೆಯ 13 ನೇ ಸುತ್ತಿನ ಮಾತುಕತೆ ನಾಳೆ ನಡೆಯಲಿದ್ದು, ಉಭಯ ದೇಶಗಳ ಸೇನಾ ಅಧಿಕಾರಿಗಳು ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಕಳೆದ ಹಲವು ತಿಂಗಳುಗಳಿಂದ ಪೂರ್ವ ಲಡಾಖ್‌ನಲ್ಲಿನ ಗಡಿ ಬಿಕ್ಕಟ್ಟಿನ ಬಗ್ಗೆ ನಾಳೆ ಭಾರತ - ಚೀನಾ ಮಾತುಕತೆ ನಡೆಸುತ್ತಿವೆ. ಉಭಯ ದೇಶಗಳ ನಡುವೆ ಗಡಿಯಲ್ಲಿ ಸೇನಾ ಮಟ್ಟದಲ್ಲಿ ನಡೆಯುತ್ತಿರುವ 13 ನೇ ಸುತ್ತಿನ ಮಾತುಕತೆ ಇದಾಗಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಜುಲೈ 31ರಂದು ಕೊನೆಯ ಬಾರಿ ಲೆಫ್ಟಿನೆಂಟ್ ಜನರಲ್ ಮಟ್ಟದ ಸಭೆ ನಡೆದಿತ್ತು. ನಾಳೆ ಬೆಳಗ್ಗೆ 10.30ಕ್ಕೆ ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಸಭೆ ನಡೆಯಲಿದೆ.
ಸಂಘರ್ಷದ ಪ್ರದೇಶಗಳ ಬಗ್ಗೆ ಸೇನಾ ಅಧಿಕಾರಿಗಳು ಚರ್ಚಿಸಿದ್ದು, 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಭಾರತೀಯ ನಿಯೋಗದ ನೇತೃತ್ವವ ವಹಿಸಲಿದ್ದಾರೆ. ಆದಷ್ಟು ಬೇಗ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಬಿಕ್ಕಟ್ಟನ್ನು ಪರಿಹರಿಸಲು ಭಾರತೀಯ ಸೇನೆ ಆಶಿಸುತ್ತಿದೆ. ಡೆಸ್ಪಾಂಗ್ ಮತ್ತು ಡೆಮ್ಚೋಕ್ ತೆರವು ಮಾಡಬೇಕೆಂದು ಸೇನೆ ಬಯಸಿದೆ ಎಂದು ಸೇನಾ ಮೂಲಗಳು ಹೇಳಿವೆ. ಇತ್ತೀಚಿಗೆ ಚೀನಾದ ಸೇನೆ ಗಡಿಯಲ್ಲಿ ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವುದರಿಂದ ಸೇನಾ ಮಟ್ಟದ ಮಾತುಕತೆ ಪ್ರಾಮುಖ್ಯತೆ ಪಡೆದಿದೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಯಾಂಗೆಟ್ಸ್ ಪ್ರದೇಶದಲ್ಲಿ ಕಳೆದ ವಾರ ಭಾರತ ಮತ್ತು ಚೀನಾ ಪಡೆಗಳು ಮುಖಾಮುಖಿಯಾಗಿದ್ದವು. ಆದರೆ, ಸ್ಥಳೀಯ ಕಮಾಂಡರ್‌ಗಳ ನಡುವಿನ ಚರ್ಚೆಯೊಂದಿಗೆ ಕೆಲವೇ ಗಂಟೆಗಳಲ್ಲಿ ವಿವಾದವನ್ನು ಬಗೆಹರಿಸಲಾಯಿತು. ಈ ಹಿಂದೆ, ಆಗಸ್ಟ್ 30 ರಂದು, 100 ಕ್ಕೂ ಹೆಚ್ಚು ಚೀನಾದ ಸೈನಿಕರು ಉತ್ತರಾಖಂಡದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಬರಹೋತಿ ಸೆಕ್ಟರ್ ಮೂಲಕ ಭಾರತದ ಗಡಿ ಪ್ರವೇಶಿಸಿದ್ದರು. ಕೆಲ ಗಂಟೆಗಳ ಬಳಿ ವಾಪಸ್ ಆಗಿದ್ದರು.