ಕಾಬೂಲ್: ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂದೆ ಸರಿದ ಎರಡೇ ದಿನಗಳಲ್ಲಿ ಉಲ್ಬಣಗೊಂಡ ಹಿಂಸಾಚಾರದಲ್ಲಿ ಭದ್ರತಾ ಪಡೆಯ ಹಿರಿಯ ಅಧಿಕಾರಿ, 102 ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 119 ಜನರು ಸಾವನ್ನಪ್ಪಿದ್ದಾರೆ.
ಜೂನ್ 3 ಮತ್ತು 4 ರಂದು ತಾಲಿಬಾನ್ ಹಾಗೂ ಅಫ್ಘನ್ ಭದ್ರತಾ ಪಡೆ ನಡುವೆ ಸಂಘರ್ಷ ನಡೆದಿದೆ. ಇತ್ತ ಪ್ರತೀಕಾರವಾಗಿ 364 ತಾಲಿಬಾನ್ ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಜೂನ್ 3 ರಂದು 8 ಪ್ರಾಂತ್ಯಗಳಲ್ಲಿ 183 ಹಾಗೂ ಜೂನ್ 4 ರಂದು ತಾಲಿಬಾನ್ 6 ಪ್ರಾಂತ್ಯಗಳ 181 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ವರದಿ ಮಾಡಿದೆ.
ಇದನ್ನೂ ಓದಿ: ಕಾಬೂಲ್ ಸ್ಫೋಟದಲ್ಲಿ ಸುದ್ದಿವಾಹಿನಿ ನಿರೂಪಕಿ ಬಲಿ.. ಕಂಬನಿ ಮಿಡಿದ ಮಾಧ್ಯಮರಂಗ
ಪ್ರತಿನಿತ್ಯ 24 ರಿಂದ 27 ಪ್ರಾಂತ್ಯಗಳಲ್ಲಿ ಘರ್ಷಣೆಗಳು ನಡೆಯುತ್ತಿವೆ. ಭದ್ರತಾ ಪಡೆಗಳ ಸಾವು-ನೋವು ಹೆಚ್ಚಾಗಿದೆ. ಆದರೆ ತಾಲಿಬಾನ್‌ನಷ್ಟು ಅಲ್ಲ. ತಾಲಿಬಾನ್ ಮತ್ತು ಅಫ್ಘನ್ ಭದ್ರತಾ ಪಡೆಗಳ ಒದಗಿಸಿದ ಸಾವು-ನೋವಿನ ಅಂಕಿ ಅಂಶಗಳು ನಿಖರವಾಗಿಲ್ಲ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಿಂದ ಹಿಂದೆ ಸರಿದ ಯುಸ್ ಸೇನೆ
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಯುಸ್ ಸೇನೆ ಕಾರ್ಯ ನಿರ್ವಹಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಯುಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ (2020ರ ಫೆಬ್ರವರಿ) ಅಮೆರಿಕ ಮತ್ತು ತಾಲಿಬಾನ್ ನಡುವೆ ಒಪ್ಪಂದವಾಗಿತ್ತು. ಒಪ್ಪಂದ ಪ್ರಕಾರ ಹಂತಹಂತವಾಗಿ ತನ್ನೆಲ್ಲಾ ಸೈನಿಕರನ್ನು ವಾಪಾಸು ಕರೆಯಿಸಿಕೊಳ್ಳುವುದಾಗಿ ಅಮೆರಿಕ ತಿಳಿಸಿತ್ತು. ಇತ್ತೀಚೆಗಷ್ಟೇ ಹಾಲಿ ಯುಸ್ ಅಧ್ಯಕ್ಷ ಜೋ ಬೈಡನ್ ಅವರು 2021ರ ಸೆಪ್ಟೆಂಬರ್ ವೇಳೆಗೆ ಎಲ್ಲಾ ಸೈನಿಕರನ್ನು ಕರೆಯಿಸಿಕೊಳ್ಳುವುದಾಗಿ ಹೇಳಿದ್ದರು. ಅದರಂತೆ ಈ ವಾರದ ಆರಂಭದಲ್ಲಿ ಒಂದಿಷ್ಟು ಅಮೆರಿಕ ಸೈನಿಕರು ಅಫ್ಘಾನಿಸ್ತಾನದಿಂದ ಹಿಂದೆ ಸರಿದಿದ್ದರು. ಇದೀಗ ಶೇ.30-44 ರಷ್ಟು ಯುಸ್ ಸೈನಿಕರು ವಾಪಸ್ ಬಂದಿದ್ದಾರೆ.