ಕಂದಹಾರ್ (ಅಫ್ಘಾನಿಸ್ತಾನ): ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಬಂದೂಕುಧಾರಿಗಳ ಗುಂಪು 100 ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆಗೈದಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮ ಟೋಲೋ ನ್ಯೂಸ್ ವರದಿ ಮಾಡಿದೆ.
ತಾಲಿಬಾನ್ ಉಗ್ರರ ತಂಡ 100 ಜನರನ್ನು ಹತ್ಯೆ ಮಾಡಿದೆ ಎಂದು ಆಫ್ಘನ್ ಆಂತರಿಕ ಸಚಿವಾಲಯವು ದೃಢಪಡಿಸಿದೆ. ತಮ್ಮ ಮೇಲಧಿಕಾರಿಗಳ (ಪಾಕಿಸ್ತಾನದ ಪಂಜಾಬ್ನಲ್ಲಿರುವ ಉಗ್ರರು) ಆದೇಶದ ಮೇರೆಗೆ ಉಗ್ರರು ಹೊಂಚು ಹಾಕಿ ಸ್ಪಿನ್ ಬೋಲ್ಡಾಕ್ನಲ್ಲಿರುವ ಮುಗ್ಧ ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಮಿರ್ವಾಯಿಸ್ ಸ್ಟಾನೆಕ್ಜೈ ಹೇಳಿದ್ದಾರೆ. ಇದು ಕ್ರೂರ ಶತ್ರುವಿನ ನಿಜವಾದ ಮುಖ ಎಂದೂ ಉಲ್ಲೇಖಿಸಿದ್ದಾರೆ.
ಕಳೆದ ವಾರ ದಾಳಿ ಮಾಡಿದ್ದ ತಾಲಿಬಾನ್ ಗುಂಪು, ಸ್ಪಿನ್ ಬೋಲ್ಡಾಕ್ ಪ್ರದೇಶವನ್ನು ವಶಪಡಿಸಿಕೊಂಡು, ಲೂಟಿ ಮಾಡಿದ್ದರು. ಸರ್ಕಾರಿ ಅಧಿಕಾರಿಗಳ ವಾಹನಗಳನ್ನು ವಶಪಡಿಸಿಕೊಂಡು ಬಜಾರ್ ಮೂಲಕ ಪಾಕ್ನ ಬಲೂಚಿಸ್ತಾನ ಪ್ರಾಂತ್ಯಕ್ಕೆ ತೆರಳಿದ್ದರು. ಮನೆಯೊಂದರಲ್ಲಿ ತಾಲಿಬಾನ್ ಧ್ವಜ ಹಾರಿಸಿದ್ದರು.
ಅಲ್ಲದೇ, ಕಂದಹಾರ್‌ನ ಪ್ರಾಂತೀಯ ಮಂಡಳಿಯ ಸದಸ್ಯರೊಬ್ಬರು, ಅಪರಿಚಿತ ಬಂದೂಕುಧಾರಿಗಳು ಈದ್‌ಗೆ ಒಂದು ದಿನ ಮುಂಚಿತವಾಗಿ ನನ್ನಿಬ್ಬರು ಮಕ್ಕಳನ್ನು ಮನೆಯಿಂದ ಹೊರ ಕರೆದುಕೊಂಡು ಹೋಗಿ ಕೊಂದರು ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ಮಕ್ಕಳಿಗೆ ಯಾವುದೇ ಮಿಲಿಟರಿ ಗುಂಪಿನೊಂದಿಗೆ ಸಂಬಂಧವಿರಲಿಲ್ಲ. ನನ್ನ ಮಕ್ಕಳನ್ನು ಕೊಂದಿರುವವರು ಯಾರೇ ಆಗಿರಲಿ, ಅವರನ್ನು ಬಂಧಿಸಿ ಶಿಕ್ಷೆಗೆ ಗುರಿ ಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಆಫ್ಘನ್ ಭದ್ರತಾ ಸಂಸ್ಥೆಗಳ ಪ್ರಕಾರ, ಸ್ಪಿನ್ ಬೋಲ್ಡಾಕ್ನಲ್ಲಿ ಮೃತದೇಹಗಳನ್ನು ತೆರವುಗೊಳಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ನಾವು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿಲ್ಲ. ಇದಕ್ಕೂ - ನಮಗೂ ಸಂಬಂಧವಿಲ್ಲ ಎಂದು ತಾಲಿಬಾನ್ ಆರೋಪವನ್ನು ತಳ್ಳಿ ಹಾಕಿದೆ.
ತಾಲಿಬಾನ್ ಆಕ್ರಮಣ ಹೆಚ್ಚಾದ ಹಿನ್ನೆಲೆ ಕಳೆದ ನಾಲ್ಕು ತಿಂಗಳಲ್ಲಿ 36 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರಗೊಂಡಿವೆ. ಯುದ್ಧ ಹೀಗೆಯೇ ಮುಂದುವರಿದರೆ ಸ್ಥಳಾಂತರಗೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಆಫ್ಘನ್ ನಿರಾಶ್ರಿತರು ಮತ್ತು ವಾಪಸಾತಿ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ಕಳೆದೊಂದು ವಾರದಲ್ಲಿ 49,500 ಕ್ಕೂ ಹೆಚ್ಚು ಜನರು ತಾಲಿಬಾನ್ ಉಗ್ರರ ಗಾಳಿಯಿಂದ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ 416 ಐಸಿಆರ್ಸಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ ವರದಿ ಮಾಸಿದೆ. ಹಿಂಸೆಗೊಳಗಾಗಿರುವ ನಾಗರಿಕರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ತಿಳಿದು ಬಂದಿದೆ.