ಬೀಜಿಂಗ್:ವಿಜ್ಞಾನ-ತಂತ್ರಜ್ಞಾನದಲ್ಲಿ ದಾಖಲೆ ಬರೆದಿರುವ ಚೀನಾ ರಾಷ್ಟ್ರವು ಇದೀಗ ಮತ್ತೊಂದು ಚಮತ್ಕಾರಕ್ಕೆ ಸಾಕ್ಷಿಯಾಗಿದೆ. ಚೀನಾದ ಚಾಂಗ್ಶಾ ನಗರದಲ್ಲಿ 10 ಅಂತಸ್ತಿನ ವಸತಿ ಕಟ್ಟಡವನ್ನು ಕೇವಲ 28 ಗಂಟೆ 45 ನಿಮಿಷಗಳಲ್ಲಿ ಸಂಪೂರ್ಣವಾಗಿ ನಿರ್ಮಿಸಲಾಗಿದ್ದು, ಇದನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ.
ಚೀನಾದ 'ಬ್ರಾಡ್ ಗ್ರೂಪ್' ಎಂಬ ರಿಯಲ್ ಎಸ್ಟೇಟ್ ಕಂಪನಿಯು 'ಲಿವಿಂಗ್ ಬಿಲ್ಡಿಂಗ್ ಸಿಸ್ಟಮ್' ತಂತ್ರಜ್ಞಾನವನ್ನು ಬಳಸಿ ಈ ಅಪಾರ್ಟ್‌ಮೆಂಟ್ ಅನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ಕಟ್ಟಡದ ನಿರ್ಮಾಣದ ವಿಡಿಯೋವನ್ನು ಸಹ ಯೂಟ್ಯೂಬ್‌ನಲ್ಲಿ ಬ್ರಾಡ್ ಗ್ರೂಪ್ ಶೇರ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೆಳಗಿನ ಲಿಂಕ್ ಬಳಸಿ ನೀವು ವಿಡಿಯೋ ವೀಕ್ಷಿಸಬಹುದಾಗಿದೆ.
ಏನಿದು ಲಿವಿಂಗ್ ಬಿಲ್ಡಿಂಗ್ ಸಿಸ್ಟಮ್?
ಲಿವಿಂಗ್ ಬಿಲ್ಡಿಂಗ್ ಸಿಸ್ಟಮ್ - ಇದು ಪೂರ್ವನಿರ್ಮಿತ ನಿರ್ಮಾಣ ವ್ಯವಸ್ಥೆಯಾಗಿದ್ದು, ಇಲ್ಲಿ ಕೊಠಡಿಗಳು ಮತ್ತು ಕಟ್ಟಡದ ಇತರ ಭಾಗಗಳನ್ನು ಮೊದಲೇ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಬಳಿಕ ಇವನ್ನು ಟ್ರಕ್ ಮೂಲಕ ಕಟ್ಟಡ ನಿರ್ಮಾಣ ಸ್ಥಳಕ್ಕೆ ಸಾಗಿಸಿ ಅಳವಡಿಸಲಾಗುತ್ತದೆ. ಪೂರ್ವನಿರ್ಮಿತ ಕಟ್ಟಡದ ಭಾಗಗಳನ್ನು ಸಾಗಿಸಿದ ಬಳಿಕ ಕೇವಲ ಬೋಲ್ಟ್ಗಳನ್ನು ಬಿಗಿಗೊಳಿಸಿ, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾತ್ರ ಇರುತ್ತದೆ. ಇದೇ ತಂತ್ರಜ್ಞಾನವನ್ನ ಬಳಸಿ ಬ್ರಾಡ್ ಗ್ರೂಪ್ ಈ 10 ಅಂತಸ್ತಿನ ಕಟ್ಟಡವನ್ನ ಒಂದೇ ದಿನದೊಳಗಾಗಿ ನಿರ್ಮಿಸಿದೆ.
ಕೇವಲ 10 ಅಂತಸ್ತಿನ ಕಟ್ಟಡವಲ್ಲ, 200 ಮಹಡಿಯುಳ್ಳ ಅತಿ ಎತ್ತರದ ಕಟ್ಟಡವನ್ನೂ ಈ ತಂತ್ರಜ್ಞಾನದ ಮೂಲಕ ಕಟ್ಟಬಹುದೆಂದು ಬ್ರಾಡ್ ಗ್ರೂಪ್ ಕಂಪನಿ ಹೇಳಿದೆ.