ಚೀನಾ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಸಿನೋವಾಕ್ ಬಯೋಟೆಕ್ನ ಲಸಿಕೆ ಸೇರಿ ನಾಲ್ಕು ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳ ಮೂರನೇ ಮತ್ತು ಅಂತಿಮ ಹಂತ ಪ್ರವೇಶಿಸಿವೆ. ಚೀನಾ ಕೊರೊನಾ ವೈರಸ್ ಲಸಿಕೆ ತಯಾರಿಕೆಯ ಪ್ರಯತ್ನದಲ್ಲಿ ನಾಯಕನಾಗಿ ಹೊರಹೊಮ್ಮಿದೆ. ಆದರೆ, ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಕುರಿತು ಜಾಗತಿಕ ಮಟ್ಟದಲ್ಲಿ ಕಳವಳವಿದೆ. ಚೀನಾದ ಅಗ್ರ 3 ಕೋವಿಡ್ -19 ಲಸಿಕೆಗಳ ಸ್ಥಿತಿಯ ಕುರಿತಾದ ಮಾಹಿತಿ ಇಲ್ಲಿದೆ.
ಚೀನಾ ಪ್ರಸ್ತುತ ಅಭಿವೃದ್ಧಿಯ ಹಂತಗಳಲ್ಲಿರುವ ನಾಲ್ಕು ಲಸಿಕೆಗಳನ್ನು ಹೊಂದಿದೆ. ಕ್ಲಿನಿಕಲ್ ಪ್ರಯೋಗಗಳ ಅಂತಿಮ ಹಂತ, ಮೂರನೇ ಹಂತದಲ್ಲಿ ಲಸಿಕೆಯ ಅಡ್ಡಪರಿಣಾಮಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಲಸಿಕೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಸಾವಿರಾರು ಸ್ವಯಂಸೇವಕರನ್ನು ಇದು ಒಳಗೊಂಡಿದೆ.
ಕೋವಿಡ್-19 ಹರಡುವಿಕೆಯು ಚೀನಾದಲ್ಲಿ ಹೆಚ್ಚಾಗಿರುವುದರಿಂದ ಚೀನಾದ ಲಸಿಕೆ ಕಂಪನಿಗಳು ತಮ್ಮ ಪ್ರಯೋಗಗಳನ್ನು ನಡೆಸಲು ವಿದೇಶಗಳೊಂದಿಗೆ ಸಹಭಾಗಿತ್ವ ಹೊಂದಿವೆ. ಸಿನೋಫಾರ್ಮ್‌ನ ಲಸಿಕೆಯ ಪ್ರಯೋಗಗಳು ಶೇ.86ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಡಿಸೆಂಬರ್ 9ರಂದು ಯುಎಇ ವರದಿ ಮಾಡಿದೆ. ಅದರ ವಿಶ್ಲೇಷಣೆಯನ್ನು ಅನುಸರಿಸಿ ಯುಎಇ, ಚೀನಾದ ಲಸಿಕೆ ಬಳಕೆ ಅಧಿಕೃತವಾಗಿ ಅನುಮೋದಿಸಿದ ಮೊದಲ ದೇಶವಾಗಿದೆ.
ಚೀನಾ ಈಗಾಗಲೇ ತನ್ನ ಜನತೆಗೆ ಸಿನೋಫಾರ್ಮ್ ಲಸಿಕೆಗಳನ್ನು ನೀಡುತ್ತಿದ್ದು, ತುರ್ತು ಬಳಕೆಯ ಮಾರ್ಗಸೂಚಿಗಳ ಅಡಿ ಈವರೆಗೆ 1 ಮಿಲಿಯನ್ ಜನರು ಲಸಿಕೆ ಪಡೆದಿದ್ದಾರೆ. ಆದರೆ, ಇನ್ನೂ ಯಾವುದೇ ಲಸಿಕೆಗೆ ಅಂತಿಮ ಅನುಮೋದನೆ ದೊರಕಿಲ್ಲ.
ಚೀನಾದ ಅಗ್ರ 3 ಕೋವಿಡ್ -19 ಲಸಿಕೆಗಳು :
1. ಕೊರೊನಾವಾಕ್/ಸಿನೋವಾಕ್
ತಯಾರಕರು/ಡೆವಲಪರ್ : ಸಿನೋವಾಕ್
ಚೀನಾದ ಖಾಸಗಿ ಕಂಪನಿ ಸಿನೋವಾಕ್ ಬಯೋಟೆಕ್ ಕೊರೊನಾ ವಾಕ್ ಎಂಬ ಲಸಿಕೆ ಪರೀಕ್ಷಿಸುತ್ತಿದೆ. 743 ಸ್ವಯಂಸೇವಕರ ಮೇಲೆ ಹಂತ 1/2 ಪ್ರಯೋಗಗಳು ಯಾವುದೇ ತೀವ್ರ ಪ್ರತಿಕೂಲ ಪರಿಣಾಮಗಳನ್ನು ಬೀರಿಲ್ಲ ಮತ್ತು ಪ್ರತಿರಕ್ಷಣಾ ಪ್ರತಿಕ್ರಿಯೆ ಉಂಟು ಮಾಡಿದೆ ಎಂದು ಜೂನ್‌ನಲ್ಲಿ ಕಂಪನಿ ಘೋಷಿಸಿದೆ.
ಸಿನೋವಾಕ್ ಜುಲೈನಲ್ಲಿ ಬ್ರೆಜಿಲ್ನಲ್ಲಿ 3ನೇ ಹಂತದ ಪ್ರಯೋಗ ಮತ್ತು ಮುಂದಿನ ತಿಂಗಳು ಇಂಡೋನೇಷ್ಯಾದಲ್ಲಿ ಮತ್ತೊಂದು ಪ್ರಯೋಗವನ್ನು ಪ್ರಾರಂಭಿಸಿದೆ. ಜುಲೈನಲ್ಲಿ ಸೀಮಿತ ಬಳಕೆಗಾಗಿ ಚೀನಾ ಸರ್ಕಾರ ಸಿನೋವಾಕ್ ಲಸಿಕೆಗೆ ತುರ್ತು ಅನುಮೋದನೆ ನೀಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸಿನೋವಾಕ್ ಲಸಿಕೆ ತಯಾರಿಕೆ ನಡೆಸುತ್ತಿದ್ದು, ಮಾರ್ಚ್ 2021ರ ವೇಳೆಗೆ ಇಂಡೋನೇಷ್ಯಾಕ್ಕೆ 40 ಮಿಲಿಯನ್ ಪ್ರಮಾಣವನ್ನು ಪೂರೈಸುವ ಒಪ್ಪಂದಕ್ಕೆ ಬಂದಿದೆ.
ವೈದ್ಯಕೀಯ ಪ್ರಯೋಗಗಳು :ಸಿನೋವಾಕ್ ಎಲ್ಎಸ್ 2020ರ ಜನವರಿ 28ರಂದು COVID-19 ವಿರುದ್ಧ ಲಸಿಕೆಯ ಅಭಿವೃದ್ಧಿಗೆ ಚಾಲನೆ ನೀಡಿತು. ಏಪ್ರಿಲ್ 13, 2020ರಂದು ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಆಡಳಿತ (ಎನ್‌ಎಂಪಿಎ) ಚೀನಾದಲ್ಲಿ ಹಂತ I ಮತ್ತು II ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮೋದನೆ ನೀಡಿತು.
ವಯಸ್ಕರು (18 ರಿಂದ 59 ವರ್ಷ ವಯಸ್ಸಿನವರು) ಮತ್ತು ವೃದ್ಧ ಸ್ವಯಂಸೇವಕರ (60 ವರ್ಷ ಮತ್ತು ಮೇಲ್ಪಟ್ಟವರು) ಮೇಲೆ ಚೀನಾದ ಜಿಯಾಂಗ್ಸು ಮತ್ತು ಹೆಬೀ ಪ್ರಾಂತ್ಯಗಳಲ್ಲಿ ಕ್ರಮವಾಗಿ ಏಪ್ರಿಲ್ 16 ಮತ್ತು ಮೇ 22ರಂದು ಹಂತ 1 ಹಾಗೂ II ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಯಿತು.
ಲಸಿಕೆ ತೆಗೆದುಕೊಡಂಡವರು ಡೋಸೇಜ್ ಚೆನ್ನಾಗಿ ಸಹಿಸಿಕೊಳ್ಳುತ್ತಾರೆ ಮತ್ತು ಲಸಿಕೆ ಸಂಬಂಧಿತ ಯಾವುದೇ ಪ್ರತಿಕೂಲ ಘಟನೆಗಳು ವರದಿಯಾಗಿಲ್ಲ. ಟರ್ಕಿಯ ಜೊತೆಗೆ 3ನೇ ಹಂತದ ಪರಿಣಾಮಕಾರಿತ್ವದ ಅಧ್ಯಯನಕ್ಕಾಗಿ ಕಂಪನಿಯು ಚೀನಾದ ಹೊರಗಿನ ಹಲವಾರು ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ಆರಂಭಿಕ ಹಂತ 1 ಮತ್ತು ಹಂತ 2ರ ಪ್ರಯೋಗಗಳ ಆಧಾರದ ಮೇಲೆ ಸಿನೋವಾಕ್‌ನ ಲಸಿಕೆಯ ಪರಿಣಾಮಕಾರಿತ್ವದ ಕುರಿತು ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆಗಳು ಅಧ್ಯಯನ ಪ್ರಕಟಿಸಿದವು. ಪರಿಣಾಮಕಾರಿತ್ವವು ಮಧ್ಯಮವಾಗಿದೆ ಎಂದು ಅಧ್ಯಯನವು ತಿಳಿಸಿದೆ. ಚೇತರಿಸಿಕೊಂಡ ಕೋವಿಡ್-19 ರೋಗಿಗಳಲ್ಲಿ ಕಂಡು ಬರುವ ಪ್ರತಿಕಾಯಗಳ ಮಟ್ಟಕ್ಕಿಂತ ಲಸಿಕೆ ಕಡಿಮೆ ಮಟ್ಟದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.