ಢಾಕಾ: ಎರಡು ದಿನಗಳ ಬಾಂಗ್ಲಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಕೆಲವೊಂದು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದರ ಬೆನ್ನಲ್ಲೇ 1.2 ಮಿಲಿಯನ್ ಕೋವಿಡ್ ವ್ಯಾಕ್ಸಿನ್ ಗಿಫ್ಟ್ ನೀಡಿದ್ದಾರೆ.
ಢಾಕಾದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಅವರಿಗೆ ಪ್ರಾತಿನಿಧಿಕ ಪೆಟ್ಟಿಗೆ ಹಸ್ತಾಂತರ ಮಾಡಿದ್ದಾರೆ. ಭಾರತದಿಂದ 30 ಮಿಲಿಯನ್ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಲು ಬಾಂಗ್ಲಾದೇಶ ಕಳೆದ ನವೆಂಬರ್ ತಿಂಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ 9 ಮಿಲಿಯನ್ ವ್ಯಾಕ್ಸಿನ್ ರವಾನೆ ಮಾಡಲಾಗಿದೆ. ಇದೀಗ 1.2 ಮಿಲಿಯನ್ ವ್ಯಾಕ್ಸಿನ್ ಗಿಫ್ಟ್ ಆಗಿ ನೀಡುವುದಾಗಿ ಭಾರತ ಘೋಷಣೆ ಮಾಡಿದೆ. ಜತೆಗೆ 109 ಆ್ಯಂಬುಲೆನ್ಸ್ಗಳನ್ನ ಭಾರತ ಬಾಂಗ್ಲಾದೇಶಕ್ಕೆ ಉಚಿತವಾಗಿ ನೀಡಿದೆ.