ಯಾರೊಂದಿಗೆ ಮನುಷ್ಯ ಇರುತ್ತಾನೋ, ಅವರಂತೆಯೇ ಆಗುತ್ತಾನೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಮಂಗಗಳ ಜೊತೆ ಇದ್ದರೆ, ಮಂಗನಂತೆಯೇ ಆಗುತ್ತಾನೆಯೇ.. ಎಲ್ಲೋ ಕೆಲವು ಸಂಗತಿಗಳನ್ನು ನಾವು ಕೇಳಿ ತಿಳಿದುಕೊಂಡಿದ್ದೆವು. ಕೆಲವೊಂದು ಸಿನಿಮಾಗಳಲ್ಲೂ ಈ ರೀತಿಯ ಸಂಗತಿಗಳನ್ನು ಚಿತ್ರಿಸಲಾಗಿದೆ.
ಅದು 1991, ಆರು ವರ್ಷದ ಬಾಲಕನೋರ್ವ ಉಗಾಂಡಾದ ಗ್ರಾಮಸ್ಥನೊಬ್ಬನಿಗೆ ಪತ್ತೆಯಾಗಿದ್ದ. ಅವರನ್ನು ಅನಾಥಾಶ್ರಮದಲ್ಲಿಟ್ಟು ಪೋಷಣೆ ಮಾಡಲಾಗಿತ್ತು. ಅನಾಥಾಶ್ರಮದಲ್ಲಿ ಆತ ಆಫ್ರಿಕಾದ ಮಕ್ಕಳೊಂದಿಗೆ ಸೇರಿ ಮಾತನಾಡುವುದನ್ನು ಕಲಿತುಕೊಂಡನು.
ಆತನ ಹೆಸರು ಜಾನ್. ಆತನನ್ನು ದತ್ತು ತೆಗೆದುಕೊಂಡ ವ್ಯಕ್ತಿಯ ಹೆಸರು ಪೌಲ್ ವಾಸ್ವಾ. 'ಆತನನ್ನು ದತ್ತು ತೆಗೆದುಕೊಂಡಾಗ ಮೈತುಂಬಾ ಕೂದಲುಗಳಿದ್ದವು. ಕಾಡಿನಲ್ಲಿ ವಾಸಿಸುವ ಜನರ ಮಕ್ಕಳಿದ್ದಂತೆ ಆತನಿದ್ದನು. ಅವನ ಉಗುರುಗಳು ಜಾಸ್ತಿ ಬೆಳೆದು ಸುರುಳಿಯಾಕಾರದಲ್ಲಿ ಸುತ್ತಿಕೊಂಡಿದ್ದವು ಎಂದು ಪೌಲ್ ವಾಸ್ವಾ ಹೇಳಿದ್ದಾರೆ.
ಅಚ್ಚರಿಯ ವಿಚಾರವೆಂದರೆ ಕೆಲವು ವರ್ಷಗಳು ಕಳೆದ ಮೇಲೆ ಬಿಬಿಸಿ ಚಾನೆಲ್ ವೆರ್ವೆಟ್ ಮಂಗಗಳ ಕುರಿತ ಸಾಕ್ಷ್ಯಚಿತ್ರ ತಯಾರಿಸಲು ಜಾನ್ನನ್ನು ಕರೆದುಕೊಂಡು ಕಾಡಿಗೆ ತೆರಳಿತ್ತು. ಈ ವೇಳೆ ಮಂಗಗಳೊಂದಿಗೆ ಈತ ಮಂಗಗಳ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದನು. ಅವನೇ ಹೇಳುವಂತೆ ಮಂಗಗಳೇ ಆತನಿಗೆ ಮರಹತ್ತುವುದು ಮತ್ತು ಆಹಾರವನ್ನು ಹುಡುಕುವುದನ್ನು ಹೇಳಿಕೊಟ್ಟಿವೆಯಂತೆ.
ಜಾನ್ 1988ರಲ್ಲಿ ತನ್ನ ತಂದೆ-ತಾಯಿ ಹತ್ಯೆಯಾದ ಬಳಿಕ ತನ್ನ ಮನೆಯಿಂದ ಕಾಡಿಗೆ ಓಡಿ ಹೋಗಿ ಕೋತಿಗಳ ಜೊತೆಯಲ್ಲಿ ವಾಸ ಮಾಡಿದ್ದನು ಎಂದು ಹೇಳಲಾಗುತ್ತಿದೆ. ಅಂದರೆ ಮೂರು ವರ್ಷದವನಿದ್ದಾಗಲೇ ಆತ ಮಂಗಗಳೊಂದಿಗೆ ವಾಸ ಮಾಡಲು ಆರಂಭಿಸಿದ್ದನು ಎಂದು ತಿಳಿದುಬಂದಿದೆ