ನ್ಯೂಯಾರ್ಕ್ :ಗಾಳಿಯಲ್ಲಿರುವ ಕೊರೊನಾ ವೈರಸ್ನ ಸಣ್ಣ ಕಣಗಳಿಂದ ಜನರಿಗೆ ಸೋಂಕು ತಗುಲಬಹುದೆಂದು 32 ರಾಷ್ಟ್ರಗಳ 200ಕ್ಕೂ ಹೆಚ್ಚು ವಿಜ್ಞಾನಿಗಳು ಡಬ್ಲ್ಯುಹೆಚ್‌ಒಗೆ ಪತ್ರ ಬರೆದಿದ್ದಾರೆ. ಯುಎನ್ ಆರೋಗ್ಯ ಸಂಸ್ಥೆಯೂ ಈ ಮೊದಲು ಕೆಮ್ಮು ಮತ್ತು ಸೀನುವುದರಿಂದ ಸೋಂಕು ಹರಡುತ್ತದೆ ಎಂದು ಹೇಳಿತ್ತು. ಜನರು ಬಾರ್, ರೆಸ್ಟೋರೆಂಟ್, ಕಚೇರಿ, ಮಾರುಕಟ್ಟೆ ಮತ್ತು ಕ್ಯಾಸಿನೊಗಳಿಗೆ ಹೋಗುತ್ತಿರುವುದರಿಂದ ಗಾಳಿಯಲ್ಲಿನ ಕಣಗಳ ಮೂಲಕ ಸೋಂಕು ಹೆಚ್ಚುತ್ತಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್‌ನ ವರದಿಯೊಂದು ಹೇಳುತ್ತದೆ.
ಡಬ್ಲ್ಯುಹೆಚ್‌ಒಗೆ 32 ದೇಶಗಳ 239 ವಿಜ್ಞಾನಿಗಳು ಬರೆದ ಪತ್ರದಲ್ಲಿ ಗಾಳಿಯಲ್ಲಿನ ಸಣ್ಣ ಕಣಗಳ ಮೂಲಕ ಜನರಿಗೆ ಸೋಂಕು ಹರಡಲಿದೆ ಎಂದು ತೋರಿಸಲು ಪುರಾವೆಗಳಿವೆ ಎಂದು ವಿವರಿಸಿದ್ದಾರೆ. ಅಲ್ಲದೇ ಈ ಪತ್ರವನ್ನು ಮುಂದಿನ ದಿನಗಳಲ್ಲಿ ವಿಜ್ಞಾನ ನಿಯತಕಾಲಿಕೆಯಲ್ಲಿ ಪ್ರಕಟಿಸುವ ಉದ್ದೇಶವೂ ವಿಜ್ಞಾನಿಗಳಿಗಿದೆ.
ಸೀನಿದಾಗ ಹೊರಬರುವ ದ್ರವಕಣಗಳ ಗುಳ್ಳೆಗಳು ಗಾಳಿಯಲ್ಲಿ ಹಿಗ್ಗುತ್ತವೆ. ಸೀನಿದಾಗ ವೇಗವಾಗಿ ಹೊರಬೀಳುವ ದ್ರವಕಣಗಳು ಒಂದು ಕೊಠಡಿಯಷ್ಟು ದೊಡ್ಡದಾಗಿ ಹರಡಿಕೊಳ್ಳುತ್ತವೆ. ಇಂತ ಸೂಕ್ಷ್ಮ ಕಣಗಳು ಗಾಳಿಯಲ್ಲಿ ತೇಲುತ್ತಾ ಮತ್ತೊಬ್ಬರ ದೇಹ ಪ್ರವೇಶಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವಿಜ್ಞಾನಿಗಳು ನೀಡಿರುವ ಈ ವರದಿಗೆ ವೈಜ್ಞಾನಿಕವಾಗಿ ಯಾವುದೇ ಪುರಾವೆಗಳಿಲ್ಲ. ಸಾಧ್ಯವಾದಷ್ಟು ಶೀಘ್ರ ಈ ಕುರಿತು ಮೌಲ್ಯಮಾಪನ ಮಾಡುತ್ತೇವೆ. ಆದರೆ, ಅವರ ವಿಮರ್ಶೆಯ ಗುಣಮಟ್ಟವನ್ನು ಪರಿಶೀಲಿಸಲು ಯುಎನ್ ಆರೋಗ್ಯ ಸಂಸ್ಥೆ ಪ್ರಯತ್ನಿಸುತ್ತದೆ ಎಂದು ಡಬ್ಲ್ಯುಹೆಚ್‌ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಹೇಳಿದರು. ಗಾಳಿಯಲ್ಲಿ ಸೋಂಕು ಹರಡುತ್ತದೆ ಎಂದು ನಂಬಲು ಸಾಕಷ್ಟು ಆಧಾರಗಳಿಲ್ಲ ಎಂದೇ ವಿಶ್ವ ಆರೋಗ್ಯ ಸಂಸ್ಥೆಯೂ ನ್ಯೂಯಾರ್ಕ್ ಟೈಮ್ಸ್ಗೆ ಪ್ರತಿಕ್ರಿಯಿಸಿದೆ.
ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತದೆ ಎಂಬುದನ್ನು ಪರಿಗಣಿಸಲು ನಾವು ಸಿದ್ಧರಿದ್ದೇವೆ. ಆದರೆ, ಈ ಪ್ರತಿಪಾದನೆಗೆ ಈವರೆಗೆ ಯಾವುದೇ ಆಧಾರಗಳು ದೊರೆತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.