ಜಿನೀವಾ (ಸ್ವಿಟ್ಜರ್ಲೆಂಡ್): ಕೋವಿಡ್ ಲಸಿಕೆಯ ಉತ್ಪಾದನೆ, ಪೂರೈಕೆಯನ್ನು ಹೆಚ್ಚಿಸಲು ವ್ಯಾಪಾರಕ್ಕೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕುಗಳ (TRIPS) ಜಾರಿಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡಬೇಕೆಂಬ ಭಾರತ, ದಕ್ಷಿಣ ಆಫ್ರಿಕಾದ ಮನವಿ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋವಿಡ್ ವ್ಯಾಕ್ಸಿನ್ ತಯಾರಿಸಲು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳನ್ನು ಮನ್ನಾ ಮಾಡುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಬಲವಾಗಿ ಬೆಂಬಲಿಸುತ್ತದೆ ಎಂದು ಅವರು ಹೇಳಿದ್ದಾರೆ.
'ಸಂಕಷ್ಟ ಕಾಲದಲ್ಲಿ ಲಾಭದ ಲೆಕ್ಕಾಚಾರ ಬೇಡ'
"ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ರಸ್ತಾಪಿಸಿರುವ ಪೇೆಟೆಂಟ್ ಮನ್ನಾ ಮಾಡಬೇಕು ಎಂದು ಡಬ್ಲ್ಯುಹೆಚ್‌ಒ ಬಲವಾಗಿ ನಂಬಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧನೊಮ್ ಈ ಬಗ್ಗೆ ಆಗಾಗ್ಗೆ ಮಾತನಾಡಿದ್ದಾರೆ. ಸಾಂಕ್ರಾಮಿಕದ ಮಧ್ಯೆ ಪೇಟೆಂಟ್ ಮತ್ತು ಲಾಭದ ಬಗ್ಗೆ ಚಿಂತೆ ಮಾಡುವ ಸಮಯ ಇದಲ್ಲ" ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಜಗತ್ತಿನಲ್ಲಿ ಕೋವಿಡ್ ನಿಯಂತ್ರಣಕ್ಕೆ 'ಟ್ರಿಪ್ಸ್' ನಿಯಮಗಳಲ್ಲಿ ಬದಲಾವಣೆಗೆ ಒತ್ತಾಯಿಸಿದ ಡಬ್ಲ್ಯೂಟಿಒ ಮುಖ್ಯಸ್ಥ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ, ವಿಶ್ವ ವ್ಯಾಪಾರ ಸಂಸ್ಥೆಯ 57 ಸದಸ್ಯರೊಂದಿಗೆ ಕೋವಿಡ್ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಚಿಕಿತ್ಸೆಗಾಗಿ TRIPS ಒಪ್ಪಂದದ ಕೆಲವು ನಿಬಂಧನೆಗಳಿಂದ ಮನ್ನಾ ಮಾಡುವ ವಿಚಾರವನ್ನು ಪ್ರಸ್ತಾಪಿಸಿತು. ಕೊರೊನಾ ಲಸಿಕೆಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಮನ್ನಾ ಕುರಿತು ವಿಶ್ವ ವ್ಯಾಪಾರ ಸಂಸ್ಥೆ(WTO) ಮಾತುಕತೆ ನಡೆಸಲು ತಿಂಗಳುಗಳ ಸಮಯಾವಕಾಶ ತೆಗೆದುಕೊಳ್ಳಬಹುದು ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
"ಈ ಸಮಯವು ನಿರ್ಣಾಯಕವಾದುದು. ಆದ್ದರಿಂದ ಈ ಕಾರ್ಯ ಶೀಘ್ರವಾಗಿ ನಡೆಯಬೇಕಿದೆ. ಒಂದು ಕಂಪನಿಯು ಲಸಿಕೆ ತಯಾರಿಸಲು ತಮ್ಮ ಜ್ಞಾನ ಮತ್ತು ಅವರ ಪರಿಣತಿ ಮತ್ತು ಅವರ ಪ್ರೋಟೋಕಾಲ್‌ಗಳನ್ನು ಹಂಚಿಕೊಳ್ಳುತ್ತದೆ ಎಂದು ನಿರ್ಧರಿಸಿದರೆ ಪರವಾನಗಿ ಒಪ್ಪಂದವನ್ನು ಸೇರಿಸುವುದನ್ನು ತಡೆಯಲು ಏನೂ ಇಲ್ಲ ಮತ್ತು ಅದನ್ನೇ ನಾವು ಉತ್ತೇಜಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:TRIPS ಮನ್ನಾಗೆ ಬೆಂಬಲಿಸಿ: ಯುರೋಪ್ ನಾಯಕರಿಗೆ ಮೋದಿ ಮನವಿ
"ಲಸಿಕೆಗಳು ಹೆಚ್ಚಾದಾಗ ವರ್ಷದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಉತ್ತಮಗೊಳ್ಳಲು ಪ್ರಾರಂಭಿಸಬೇಕು. ಆದರೆ ಮುಂದಿನ ಎರಡು ತಿಂಗಳುಗಳಲ್ಲಿ ಪೂರೈಕೆ ಬೇಡಿಕೆಗಿಂತ ಕಡಿಮೆಯಿರುತ್ತದೆ. ಆದ್ದರಿಂದ ನಾವು ಸರಬರಾಜುಗಳನ್ನು ಬುದ್ಧಿವಂತಿಕೆಯಿಂದ ಬಳಸಬೇಕು ಮತ್ತು ಹೆಚ್ಚಿನ ಆದ್ಯತೆಯ ಗುಂಪುಗಳ ವ್ಯಾಕ್ಸಿನೇಷನ್‌ಗೆ ಆದ್ಯತೆ ನೀಡಬೇಕು" ಎಂದಿದ್ದಾರೆ.
ಲಸಿಕೆ ಉತ್ಪಾದನೆಗೆ ಪೇಟೆಂಟ್ ಅಡ್ಡಿ
ಭಾರತ ಮಾತ್ರವಲ್ಲದೇ ವಿಶ್ವದ ಇತರ ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳು ಲಸಿಕೆಯನ್ನು ಉತ್ಪಾದಿಸಲು ವ್ಯಾಕ್ಸಿನ್ಗಳಿಗೆ ನೀಡಿರುವ ಪೇಟೆಂಟ್ ಅಡ್ಡಿಯಾಗಿದೆ. ಆದರೆ ಪ್ರಸ್ತುತ ಉಲ್ಬಣಿಸುತ್ತಿರುವ ಕೊರೊನಾ ವೈರಸ್ ತಡೆಗೆ ಲಸಿಕೆಯ ಮೇಲಿನ ಪೇಟೇಂಟ್ಗೆ ತಾತ್ಕಾಲಿಕವಾಗಿ ವಿನಾಯಿತಿ ನೀಡಬೇಕು. ಕೊರೊನಾ ಲಸಿಕೆಯ ಪೇಟೆಂಟ್ (TRIPS) ಗೆ ತಾತ್ಕಾಲಿಕ ವಿನಾಯಿತಿ ನೀಡುವ ಭಾರತದ ಬೇಡಿಕೆಗೆ ಈಗಾಗಲೇ ಯುಎಸ್ ಅಧ್ಯಕ್ಷ ಜೋ ಬೈಡನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಸಿಕೆ ಉತ್ಪಾದಿಸುವ ಅಮೆರಿಕದ ಕಂಪನಿಗಳು ಲಸಿಕೆಯ ಪೇಟೆಂಟ್ಗೆ ತಾತ್ಕಾಲಿಕ ವಿನಾಯಿತಿ ನೀಡುವುದಕ್ಕೆ ವಿರೋಧಿಸುತ್ತಿವೆ. ಜೊತೆಗೆ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ಹಾಗೂ ಜರ್ಮನ್ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ.
ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ - ಸಂಬಂಧಿತ ಅಂಶಗಳು ಅಥವಾ ಟಿಆರ್ಐಪಿಎಸ್ ಒಪ್ಪಂದವು ಜನವರಿ 1995ರಲ್ಲಿ ಜಾರಿಗೆ ಬಂದಿತು. ಈ ಒಪ್ಪಂದವು ಬೌದ್ಧಿಕ ಆಸ್ತಿ ಹಕ್ಕುಗಳಾದ ಹಕ್ಕುಸ್ವಾಮ್ಯ, ಪೇಟೆಂಟ್‌ಗಳು ಮತ್ತು ವ್ಯಾಪಾರ ರಹಸ್ಯಗಳನ್ನು ರಕ್ಷಿಸಲು ಇರುವ ಬಹುಪಕ್ಷೀಯ ಒಪ್ಪಂದವಾಗಿದೆ.