ಲಾಸ್ ವೇಗಾಸ್:ಹೈಪರ್‌ಲೂಪ್‌ನ ಪರೀಕ್ಷೆಯನ್ನು ನೆವಾಡಾದ ಲಾಸ್ ವೇಗಾಸ್‌ನ ಮರುಭೂಮಿಯಲ್ಲಿರುವ ವರ್ಜಿನ್ ಹೈಪರ್‌ಲೂಪ್ ಪಾಡ್ ಕಂಪನಿಯ ಡೆವ್ಲೂಪ್ನ ಟೆಸ್ಟ್ ಟ್ರ್ಯಾಕ್‌ನಲ್ಲಿ ನಡೆಸಲಾಯಿತು.
ಹೊಸ ಸಾರಿಗೆ ವಿಧಾನವಾಗಿರುವ ಹೈಪರ್‌ಲೂಪ್ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಜೋಶ್ ಜಿಯಾಗೆಲ್, ನಿರ್ದೇಶಕರಾದ ಸಾರಾ ಲುಚಿಯಾನ್ ಈ ಹೊಸ ಮಾದರಿಯ ರೂಪಾಂತರದಲ್ಲಿ ರೈಡ್ ಮಾಡಿದ ವಿಶ್ವದ ಮೊಟ್ಟ ಮೊದಲ ಪ್ರಯಾಣಿಕರು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪರೀಕ್ಷೆಯ ಸಮಯದಲ್ಲಿ ಹೈಪರ್‌ಲೂಪ್ ಪಾಡ್ ಪ್ರಯಾಣಿಸಿದ ವೇಗ ಗಂಟೆಗೆ ಸುಮಾರು 160 ಕಿ.ಮೀ ಆಗಿತ್ತು. ಆದರೆ ಅದರಲ್ಲಿ ಮನುಷ್ಯರನ್ನು ಗಂಟೆಗೆ 1,223 ಕಿ.ಮೀ ವೇಗದಲ್ಲಿ ಪ್ರಯಾಣಿಸುವಂತೆ ಮಾಡುವುದು ಗುರಿಯಾಗಿದೆ.
ಕಳೆದ ಕೆಲವು ವರ್ಷಗಳಿಂದ ವರ್ಜಿನ್ ಹೈಪರ್‌ಲೂಪ್ ತಂಡವು ತನ್ನ ಅದ್ಭುತ ತಂತ್ರಜ್ಞಾನವನ್ನು ಬಳಸಿಕೊಂಡು ಈ ರೀತಿಯಾಗಿ ತಯಾರಿಸಲು ಕೆಲಸ ಮಾಡುತ್ತಿದೆ ಎಂದು ವರ್ಜಿನ್ ಗ್ರೂಪ್ ಸ್ಥಾಪಕ ಸರ್ ರಿಚರ್ಡ್ ಬ್ರಾನ್ಸನ್ ಹೇಳಿದ್ದಾರೆ.
ಹೊಸ ಸಾರಿಗೆ ವಿಧಾನವಾಗಿರುವ ಹೈಪರ್‌ಲೂಪ್
ಹೈಪರ್‌ಲೂಪ್ ಒಂದು ಹೊಸ ಸಾರಿಗೆ ವಿಧಾನವಾಗಿದ್ದು, ಒಂದೇ ಸಮಯದಲ್ಲಿ ನೂರಾರು ಜನರು ಸಂಚರಿಸಬಹುದಾಗಿದೆ. ಲಾಸ್ ವೇಗಾಸ್‌ನ ವರ್ಜಿನ್ ಹೈಪರ್‌ಲೂಪ್‌ನ 500 ಮೀಟರ್ ಡೆವ್‌ಲೂಪ್ ಪರೀಕ್ಷಾ ತಾಣದಲ್ಲಿ ಈ ಪರೀಕ್ಷೆ ನಡೆಯಿತು. ಅಲ್ಲಿ ಕಂಪನಿಯು ಈ ಹಿಂದೆ 400ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದೆ.