ವಾರ್ಸಾ (ಪೋಲೆಂಡ್) : ರಷ್ಯಾದ ಆಕ್ರಮಣದಿಂದ ಪಲಾಯನ ಮಾಡುತ್ತಿರುವ ಸಾವಿರಾರು ಉಕ್ರೇನಿಯರಿಗೆ ಸಹಾಯ ಮಾಡಿರುವುದಕ್ಕೆ ಧನ್ಯವಾದ ಅರ್ಪಿಸಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಪೋಲೆಂಡ್ ಗೆ ಪ್ರವಾಸ ಬೆಳೆಸಿದ್ದಾರೆ.
ರಷ್ಯಾದ ಪಡೆಗಳನ್ನು ಹಿಮ್ಮೆಟ್ಟಿಸುವ ಭಾಗವಾಗಿ ನ್ಯಾಟೋ ಪಡೆಗಳಿಗೆ ಮಿಗ್ -29 ವಿಮಾನಗಳನ್ನು ಹಸ್ತಾಂತರ ಮಾಡುವ ಪ್ರಸ್ತಾಪವನ್ನು ಅಮೆರಿಕಕ್ಕೆ ಪೋಲೆಂಡ್ ಮಾಡಿತ್ತು. ಆದರೆ ಅಮೆರಿಕ ಈ ಪ್ರಸ್ತಾಪ ಈಗ ಕಾರ್ಯ ಸಾಧುವಲ್ಲ ಎಂದು ತಿರಸ್ಕರಿತ್ತು. ಆದರೆ, ಪೋಲೆಂಡ್ ಯೋಜನೆ ಬಗ್ಗೆ ಯೋಚಿಸುವುದಾಗಿ ಹೇಳಿತ್ತು. ಈ ಮಧ್ಯೆ ಅಮೆರಿಕದ ಉಪಾಧ್ಯಕ್ಷರ ಭೇಟಿ ಸಹ ಕುತೂಹಲ ಮೂಡಿಸಿದೆ.
ಉಕ್ರೇನ್‌ಗೆ ಪೋಲೆಂಡ್‌ನ ಸಂಪೂರ್ಣ ಬೆಂಬಲವಿದ್ದು, ಮತ್ತು ಉಕ್ರೇನ್‌ಗೆ ಯುದ್ಧ ವಿಮಾನಗಳನ್ನು ಲಭ್ಯವಾಗುವಂತೆ ಮಾಡುವ ನಿರ್ಧಾರವು ಯುಎಸ್ ಮತ್ತು ನ್ಯಾಟೋಗೆ ಬಿಟ್ಟಿದ್ದು, ಅದು ಕೂಡ ಎಲ್ಲಾ ರಾಷ್ಟ್ರಗಳು ಒಪ್ಪಿಗೆ ನೀಡಿದರೆ ಮಾತ್ರ ಎಂದು ಪೋಲೆಂಡ್‌ನ ಪ್ರಧಾನ ಮಂತ್ರಿ ಹೇಳಿದ್ದಾರೆ.
ಇತರ ದೇಶದ ಮೂಲಕ ಪೋಲೆಂಡ್ ಯುದ್ಧ ವಿಮಾನಗಳನ್ನು ಉಕ್ರೇನ್‌ಗೆ ನೀಡಲು ಪೋಲೆಂಡ್ ನಿರಾಕರಿಸಿದ್ದು, ರಷ್ಯಾದೊಂದಿಗೆ ನೇರವಾಗಿ ಯುದ್ಧದಲ್ಲಿ ಭಾಗಿಯಾಗದೇ ನ್ಯಾಟೋ ಮಿತ್ರರಾಷ್ಟ್ರಗಳ ಜೊತೆಗೆ ಇರುವುದಾಗಿ ಹೇಳಿದೆ. ಇನ್ನು ಕಮಲ ಹ್ಯಾರಿಸ್ ಅವರು ಪೋಲೆಂಡ್ ಮತ್ತು ರೊಮೇನಿಯಾಗೆ ಭೇಟಿ ನೀಡಲಿದ್ದು, ಹಲವು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.