ವಾಷಿಂಗ್ಟನ್:'ಚೀನಾವು ಬೃಹತ್ ಪ್ರಮಾಣದಲ್ಲಿ ವಿಮಾನವಾಹಕ ವಿರೋಧಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ' ಎಂಬ ಚೀನಾ ಸರ್ಕಾರಿ ಒಡೆತನದ ಪತ್ರಿಕೆಯ (ಗ್ಲೋಬಲ್ ಟೈಮ್ಸ್) ಹೇಳಿಕೆಗೆ ಅಮೆರಿಕ ತಿರುಗೇಟು ನೀಡಿದೆ.
ಬೀಜಿಂಗ್‌ನ ಕಾನೂನುಬಾಹಿರ ಚಟುವಟಿಕೆ ಖಂಡಿಸಿರುವ ಅಮೆರಿಕವು, ಮಿಲಿಟರಿ ತಾಲೀಮು ನಡೆಸಲು ತನ್ನ ವಿಮಾನವಾಹಕ ನೌಕೆಗಳನ್ನು ಎರಡು ದಿನಗಳ ಹಿಂದೆ ದಕ್ಷಿಣ ಚೀನಾ ಸಮುದ್ರಕ್ಕೆ ಕಳುಹಿಸಿತ್ತು. ಯುಎಸ್ಎಸ್ ರೊನಾಲ್ಡ್ ರೇಗನ್ (ಸಿವಿಎನ್ 76) ಮತ್ತು ಯುಎಸ್ಎಸ್ ನಿಮಿಟ್ಜ್ (ಸಿವಿಎನ್ 68) ಎಂಬ ಎರಡು ನೌಕೆಗಳನ್ನು ದಕ್ಷಿಣ ಚೀನಾ ಸಮುದ್ರಕ್ಕೆ ರವಾನಿಸಿದ್ದು, ಅಲ್ಲಿ ಅಮೆರಿಕ ಸೈನಿಕರು ಸಮರಾಭ್ಯಾಸ ಮಾಡಲಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿ 'ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ' (PLA) ಪಡೆ ಹದ್ದಿನ ಕಣ್ಣಿಟ್ಟಿದೆ. ಚೀನಾವು ಡಿಎಫ್ -21 ಡಿ ಮತ್ತು ಡಿಎಫ್ -26 ಎಂಬ 'ಏರ್‌ಕ್ರಾಫ್ಟ್ ಕ್ಯಾರಿಯರ್ ಕಿಲ್ಲರ್' ಅನ್ನು ಹೊಂದಿದೆ. ನಮ್ಮಲ್ಲಿ ಈ ವಿಮಾನವಾಹಕ ವಿರೋಧಿ ಶಸ್ತ್ರಾಸ್ತ್ರಗಳಿರುವುದರಿಂದ ಅಮೆರಿಕ ಏನಾದರೂ ತನ್ನ ನೌಕೆಗಳೊಂದಿಗೆ ಯುದ್ಧಕ್ಕೆ ಮುಂದಾದರೆ ಅದನ್ನು ಸ್ವಾಗತಿಸಲು ನಾವು ಸಿದ್ಧ ಎಂದು ಗ್ಲೋಬಲ್ ಟೈಮ್ಸ್ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದೆ.
ಇದಕ್ಕೆ ತಿರುಗೇಟು ನೀಡಿರುವ ಯುಎಸ್ ನೌಕಾಪಡೆಯ ಮುಖ್ಯಸ್ಥರು, ಯುಎಸ್ಎಸ್ ರೊನಾಲ್ಡ್ ರೇಗನ್ ಹಾಗೂ ಯುಎಸ್ಎಸ್ ನಿಮಿಟ್ಜ್ ನೌಕೆಗಳು ಯಾವ ಬೆದರಿಕೆಗಳಿಗೂ ಬಗ್ಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಅಮೆರಿಕ ಸೇರಿದಂತೆ ಇತರ ದೇಶಗಳಿಂದ ವಿರೋಧಿಸಲ್ಪಟ್ಟಿರುವ ಮಿಲಿಟರಿ ಡ್ರಿಲ್‌ಗಳನ್ನು ಪ್ಯಾರಾಸೆಲ್ ದ್ವೀಪಗಳ ಬಳಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು ನಡೆಸುತ್ತಿರುವುದರಿಂದ ಯುಎಸ್ ತನ್ನ ನೌಕೆಗಳನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಕಳುಹಿಸಿತ್ತು. ಇಂಡೋ-ಪೆಸಿಫಿಕ್ ಪ್ರದೇಶವನ್ನು ಬೆಂಬಲಿಸುವ ಸಲುವಾಗಿ ಅಂದರೆ ಭಾರತದ ಪರ ಅಮೆರಿಕ ಈ ಕಾರ್ಯಾಚರಣೆ ಕೈಗೊಂಡಿದೆ ಎಂದು ಯುಎಸ್ ನೌಕಾಪಡೆ ದೃಢಪಡಿಸಿದೆ.