ನವದೆಹಲಿ: ಇಡೀ ಜಗತ್ತೇ ಕೋವಿಡ್ ವಿರುದ್ಧ ಹೋರಾಡುತ್ತಿದೆ. ಇಂಥ ಸಂದರ್ಭದಲ್ಲಿ ಇತರೆ ದೇಶಗಳಿಗೆ ನೆರವಿನ ಹಸ್ತ ಚಾಚಿರುವ ಅಮೆರಿಕ, ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ಹಾಗೂ ಆಫ್ರಿಕನ್ ಒಕ್ಕೂಟದ 92 ದೇಶಗಳಿಗೆ ಫೈಜರ್ ಕಂಪನಿಯ ಕೋವಿಡ್ ಲಸಿಕೆಯ 50 ಕೋಟಿ ಡೋಸ್‌ಗಳನ್ನು ನೀಡಲು ಮುಂದಾಗಿದೆ. ಆಗಸ್ಟ್‌ನಲ್ಲಿ ಲಸಿಕೆ ಪೂರೈಕೆಗೆ ಚಾಲನೆ ನೀಡಲಾಗುತ್ತದೆ. ಈ ವರ್ಷಾಂತ್ಯಕ್ಕೆ 20 ಕೋಟಿ ಡೋಸ್ ಪೂರೈಸಲಾಗುವುದು. ಉಳಿದ 30 ಕೋಟಿ ಡೋಸ್‌ಗಳನ್ನು ಮುಂದಿನ ವರ್ಷದ ಮೊದಲಾರ್ಧದ ವೇಳೆಗೆ ಪೂರೈಸಲಾಗುವುದು ಎಂದು ಶ್ವೇತಭವನ ತಿಳಿಸಿದೆ.
ವಿವಿಧ ದೇಶಗಳಿಗೆ ಉಚಿತವಾಗಿ ನೀಡುವ ಸಂಬಂಧ ಒಂದು ದೇಶ ಈವರೆಗೆ ಮಾಡಲಿರುವ ಗರಿಷ್ಠ ಪ್ರಮಾಣದ ಲಸಿಕೆಯ ಖರೀದಿ ಇದಾಗಿದೆ. ಇದು ಕೋವಿಡ್ನಿಂದ ವಿವಿಧ ರಾಷ್ಟ್ರಗಳ ಜನರನ್ನು ರಕ್ಷಿಸುವುದಕ್ಕೆ ಸಂಬಂಧಿಸಿ ಅಮೆರಿಕದ ಜನತೆಯ ಬದ್ಧತೆಯನ್ನು ತೋರುತ್ತದೆ ಎಂದೂ ಶ್ವೇತಭವನ ಹೇಳಿದೆ.