ಕರ್ನಾಟಕ

karnataka

ETV Bharat / international

ಕಾಶ್ಮೀರದ ವಾಸ್ತವ ಸ್ಥಿತಿಗತಿ ಮೌಲ್ಯಮಾಪನಕ್ಕೆ ಮುಂದಾದ ಅಮೆರಿಕದ ಸೆನೆಟರ್​ಗಳು! - ಟ್ರಂಪ್​ ಭಾರತ ಭೇಟಿ ಸುದ್ದಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಫೆಬ್ರವರಿ 24 ಹಾಗೂ 25 ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಟ್ರಂಪ್​ ಭಾರತ ಭೇಟಿಗೂ ಮುಂಚಿತವಾಗಿ ತಮ್ಮನ್ನು 'ಭಾರತದ ದೀರ್ಘಕಾಲದ ಸ್ನೇಹಿತರು' ಎಂದು ಬಣ್ಣಿಸಿಕೊಂಡಿರುವ ನಾಲ್ಕು ಪ್ರಭಾವಿ ಯುಎಸ್ ಸೆನೆಟರ್​ಗಳು, ಕಾಶ್ಮೀರದ ಮಾನವ ಹಕ್ಕುಗಳ ಪರಿಸ್ಥಿತಿ ಮತ್ತು ದೇಶದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮೌಲ್ಯಮಾಪನ ಮಾಡಲು ಪ್ರಯತ್ನ ನಡೆಸಿದ್ದಾರೆ.

trump India visit
ಟ್ರಂಪ್​ ಭಾರತ ಭೇಟಿ

By

Published : Feb 13, 2020, 12:29 PM IST

ವಾಷಿಂಗ್ಟನ್​: ಟ್ರಂಪ್ ಭಾರತ ಭೇಟಿಗೂ ಮುಂಚಿತವಾಗಿ, ಯುಎಸ್ ಸೆನೆಟರ್​ಗಳು ಜಮ್ಮು ಮತ್ತು ಕಾಶ್ಮೀರದ ಮಾನವ ಹಕ್ಕುಗಳ ಸದ್ಯದ ಪರಿಸ್ಥಿತಿ ಮತ್ತು ದೇಶದ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿಯ ಮೌಲ್ಯಮಾಪನ ಮಾಡಲು ಯುಎಸ್​ಎ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೋರನ್ನು ಕೋರಿದ್ದಾರೆ.

ಫೆಬ್ರವರಿ 12 ರಂದು ಅಮೆರಿಕ ಸೆನೆಟರ್​ಗಳ ಉಭಯಪಕ್ಷೀಯ ಗುಂಪು ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊಗೆ ಬರೆದ ಪತ್ರದಲ್ಲಿ, ಆರ್ಟಿಕಲ್​ 370ರ ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರವು ದೀರ್ಘಕಾಲದವರೆಗೆ ಅಂತರ್ಜಾಲ ಸ್ಥಗಿತಗೊಳಿಸಿದೆ. ಇದರಿಂದ ಏಳು ದಶಲಕ್ಷ ಜನರಿಗೆ ವೈದ್ಯಕೀಯ ಆರೈಕೆ, ವ್ಯವಹಾರ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ಅಡ್ಡಿಯಾಗಿದೆ ಎಂದು ತಿಳಿಸಿದೆ.

ಭಾರತ ಸರ್ಕಾರವು 2019ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿತು. ಇದರೊಂದಿಗೆ ಜನರ ಚಲನೆ, ಮೊಬೈಲ್, ದೂರವಾಣಿ ಮತ್ತು ಇಂಟರ್ನೆಟ್ ಸಂಪರ್ಕ ಸೇರಿದಂತೆ ತೀವ್ರ ನಿರ್ಬಂಧಗಳನ್ನು ವಿಧಿಸಿತು. ಆ ಬಳಿಕ ಹಲವು ದೇಶಗಳು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸುವುದರೊಂದಿಗೆ ಈ ದೌರ್ಜನ್ಯವು ಅಂತಾರಾಷ್ಟ್ರೀಯ ಟೀಕೆಗೂ ಗುರಿಯಾಯಿತು.

ಆರ್ಟಿಕಲ್ 370ರ ರದ್ದು ತನ್ನ ಆಂತರಿಕ ವಿಷಯವಾಗಿದೆ ಎಂದು ಭಾರತವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿ ಹೇಳಿದೆ. ಅಧಿಕಾರಿಗಳ ಪ್ರಕಾರ, ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಹಂತಹಂತವಾಗಿ ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ವ್ಯವಸ್ಥೆಯನ್ನು ಮರುಸ್ಥಾಪಿಸಲಾಗುತ್ತಿದೆ.

ತಮ್ಮನ್ನು ಭಾರತದ ದೀರ್ಘಕಾಲದ ಸ್ನೇಹಿತರು ಎಂದು ಬಣ್ಣಿಸಿರುವ ಯುಎಸ್ ಶಾಸಕರು ತಮ್ಮ ಪತ್ರದಲ್ಲಿ, ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಏಕಪಕ್ಷೀಯವಾಗಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯನ್ನು ರದ್ದುಪಡಿಸಿದ ಆರು ತಿಂಗಳ ನಂತರ, ಸರ್ಕಾರವು ಈ ಪ್ರದೇಶದ ಹೆಚ್ಚಿನ ಅಂತರ್ಜಾಲವನ್ನು ನಿರ್ಬಂಧಿಸುತ್ತಿದೆ ಎಂದು ಹೇಳಿದೆ.

ಪ್ರಮುಖ ರಾಜಕೀಯ ವ್ಯಕ್ತಿಗಳು ಸೇರಿದಂತೆ ನೂರಾರು ಕಾಶ್ಮೀರಿಗಳು 'ತಡೆಗಟ್ಟುವ ಬಂಧನದಲ್ಲಿ ಉಳಿದಿದ್ದಾರೆ' ಎಂದು ಸೆನೆಟರ್​ಗಳು ಪೋಂಪಿಯೋಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಇದಲ್ಲದೆ, ಭಾರತ ಸರ್ಕಾರವು ಕೆಲವು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಮತ್ತು ರಾಜ್ಯದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತರುವ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ಅಂಗೀಕಾರವನ್ನೂ ಒಳಗೊಂಡಿದೆ. ಇದನ್ನು ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತಿದೆ ಎಂದು ಸೆನೆಟರ್‌ಗಳು ಬರೆದಿದ್ದಾರೆ.

ಹೀಗಾಗಿ ರಾಜಕೀಯ ಉದ್ದೇಶಗಳಿಗಾಗಿ ಸರ್ಕಾರದಿಂದ ಬಂಧನಕ್ಕೊಳಗಾದ ವ್ಯಕ್ತಿಗಳ ಸಂಖ್ಯೆ ಮತ್ತು ಅವರ ಚಿಕಿತ್ಸೆ ಸೇರಿದಂತೆ ಭಾರತದಲ್ಲಿನ ಹಲವಾರು ಸಮಸ್ಯೆಗಳ ಬಗ್ಗೆ ರಾಜ್ಯ ಇಲಾಖೆಯ ಮೌಲ್ಯಮಾಪನಕ್ಕಾಗಿ ಸೆನೆಟರ್‌ಗಳು ಪೊಂಪಿಯೊ ಅವರನ್ನು ಕೋರಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ವಿಚಾರವಾಗಿರುವ ಪ್ರಸ್ತುತ ನಿರ್ಬಂಧಗಳು, ರಾಜ್ಯ ಪ್ರವೇಶ ಮತ್ತು ಅಲ್ಲಿನ ಧಾರ್ಮಿಕ ಸ್ವಾತಂತ್ರ್ಯಗಳ ಮೇಲಿನ ನಿರ್ಬಂಧನೆಗಳ ಬಗೆಗಿನ ಮಾಹಿತಿಯನ್ನು ಕೇಳಲಾಗಿದೆ. ಟ್ರಂಪ್​ ಭಾರತ ಭೇಟಿಗೂ ಮುನ್ನ ಈ ವಿಚಾರ ಬಹಳಷ್ಟು ಮಹತ್ವ ಪಡೆದಿದೆ.

ABOUT THE AUTHOR

...view details