ವಾಷಿಂಗ್ಟನ್: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದ ಆಕ್ರಮಣ ನೀತಿಯನ್ನು ಅಮೆರಿಕ ತೀವ್ರವಾಗಿ ಖಂಡಿಸಿದ್ದು, ಯುದ್ಧ ಅಪರಾಧಗಳಿಗಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತವರ ಆಡಳಿತದ ಬಗ್ಗೆ ತನಿಖೆಗೆ ಕೋರುವ ನಿರ್ಣಯವನ್ನು ಮಂಗಳವಾರ ರಾತ್ರಿ ಯುಎಸ್ ಸೆನೆಟ್ ಸರ್ವಾನುಮತದಿಂದ ಅಂಗೀಕರಿಸಿದೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿರ್ದೇಶದಲ್ಲಿ ರಷ್ಯಾ ಸೇನೆ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ಹಿಂಸಾಚಾರ, ಯುದ್ಧದ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಸೆನೆಟ್ ತೀವ್ರವಾಗಿ ಖಂಡಿಸುತ್ತದೆ ಎಂದು ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ. ಸಂಭಾವ್ಯ ಯುದ್ಧ ಅಪರಾಧಗಳಿಗಾಗಿ ಪುಟಿನ್, ಅವರ ಭದ್ರತಾ ಮಂಡಳಿ ಮತ್ತು ಸೇನಾ ನಾಯಕರನ್ನು ತನಿಖೆ ಮಾಡಲು ಈ ನಿರ್ಣಯ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಗಳನ್ನು ಪ್ರೋತ್ಸಾಹಿಸುತ್ತದೆ. ಈ ದೌರ್ಜನ್ಯಗಳು ಯುದ್ಧ ಅಪರಾಧಗಳಿಗಾಗಿ ತನಿಖೆಗೆ ಅರ್ಹವಾಗಿವೆ ಎಂದು ಮತ್ತೊಬ್ಬ ಸೆನೆಟರ್ ಚಕ್ ಶುಮರ್ ತಿಳಿಸಿದ್ದಾರೆ.