ನ್ಯೂಯಾರ್ಕ್:ಜಾಗತಿಕವಾಗಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ದೇಶ ಅಮೆರಿಕದಲ್ಲಿ ಕಳೆದೊಂದು ದಿನದಲ್ಲಿ 5,12,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದು ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಒಂದೇ ದಿನ ದಾಖಲಾದ ಅತಿ ಹೆಚ್ಚು ಕೋವಿಡ್ ಸೋಂಕಿತರ ಸಂಖ್ಯೆ. ಈ ಪ್ರಕರಣಗಳೂ ಸೇರಿ ಒಟ್ಟು ಸೋಂಕಿತರ ಸಂಖ್ಯೆ 54 ಮಿಲಿಯನ್ ತಲುಪಿದೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ನೀಡಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,762 ರೋಗಿಗಳು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 8,42,000 ಕ್ಕೂ ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳು ಮತ್ತು ಚೇತರಿಕೆ ಕ್ರಮವಾಗಿ 11,981,273 ಮತ್ತು 41,325,110 ಆಗಿದೆ.
ಇದೇ ವೇಳೆ, ಬೂಸ್ಟರ್ ಲಸಿಕೆಯಿಂದಲೂ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಈ ವರ್ಷದ ಜನವರಿ 8 ರಂದು ಒಂದೇ ದಿನ 2,94,015 ಪ್ರಕರಣಗಳು ಕಂಡುಬಂದಿದ್ದವು.
ಒಮಿಕ್ರಾನ್ ರೂಪಾಂತರ ದೇಶದ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಕಾರಣವಾಗಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಪ್ರಕಾರ, ದೇಶದಲ್ಲಿ ಒಮಿಕ್ರಾನ್ ಶೇ 58.6ರಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷಾರಂಭದಲ್ಲಿ ಕೋವಿಡ್ ಹೆಚ್ಚಾಗಲು ಮುಖ್ಯ ಕಾರಣವಾದ ಡೆಲ್ಟಾ ರೂಪಾಂತರವು ಈಗ ದೇಶದ ಎಲ್ಲಾ ಪ್ರಕರಣಗಳಲ್ಲಿ ಶೇ 41.1 ರಷ್ಟಿದೆ ಎಂದು ಹೇಳಿದೆ.
ಪ್ರಸ್ತುತ ಕೋವಿಡ್ನಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಸೇರಿವೆ.