ವಾಷಿಂಗ್ಟನ್ (ಯುಎಸ್) : ಕೋವಿಶೀಲ್ಡ್ ಲಸಿಕೆ ತಯಾರಿಸಲು ತುರ್ತಾಗಿ ಅಗತ್ಯವಿರುವ ಕಚ್ಚಾ ವಸ್ತುಗಳು ತಕ್ಷಣವೇ ಭಾರತಕ್ಕೆ ಲಭ್ಯವಾಗಲಿದೆ ಎಂದು ಶ್ವೇತಭವನ ಭಾನುವಾರ ತಿಳಿಸಿದೆ.
ಶನಿವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ, ಭಾರತದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಂಡಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದರು.
ಶ್ವೇತ ಭವನದ ಮಾಹಿತಿ ಪ್ರಕಾರ, ಸುಲ್ಲಿವಾನ್ ಅವರು ಕೋವಿಡ್ ವಿರುದ್ಧ ಹೋರಾಡಲು ಭಾರತದೊಂದಿಗೆ ಅಮೆರಿಕ ಇರುವುದಾಗಿ ಒಗಟ್ಟಿನ ಮಂತ್ರ ಪಠಿಸಿದ್ದಾರೆ. ಅಮೆರಿಕ ಮತ್ತು ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ದಾಳಿಗೆ ತುತ್ತಾದ ರಾಷ್ಟ್ರಗಳಾಗಿವೆ.
ಇದನ್ನೂಓದಿ: ಸ್ಪೇನ್: 22 ಜನರಿಗೆ ಕೊರೊನಾ ಸೋಂಕು ಹರಡಿದ ವ್ಯಕ್ತಿಯ ಬಂಧನ
ಕೋವಿಡ್ ಆರಂಭದಲ್ಲಿ ವೈದ್ಯಕೀಯ ವ್ಯವಸ್ಥೆಗಳ ಕೊರತೆ ಉಂಟಾದಾಗ ಭಾರತ ಯುಎಸ್ಗೆ ಸಹಾಯ ಮಾಡಿದಂತೆಯೇ, ಅಗತ್ಯ ಸಮಯದಲ್ಲಿ ಭಾರತಕ್ಕೆ ಸಹಾಯ ಮಾಡಲು ಯುಎಸ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ, ಲಭ್ಯವಿರುವ ಸಂಪನ್ಮೂಲಗಳನ್ನು ಒದಗಿಸಲು ಯುಎಸ್ ನಿರಂತರ ಕೆಲಸ ಮಾಡುತ್ತಿದೆ. ಕೋವಿಶೀಲ್ಡ್ ಲಸಿಕೆ ತಯಾರಿಸಲು ತುರ್ತಾಗಿ ಅಗತ್ಯವಿರುವ ನಿರ್ದಿಷ್ಟ ಕಚ್ಚಾ ವಸ್ತುಗಳ ಮೂಲಗಳನ್ನು ಯುಎಸ್ ಗುರುತಿಸಿದೆ. ಅದು ತಕ್ಷಣವೇ ಭಾರತಕ್ಕೆ ಲಭ್ಯವಾಗಲಿದೆ ಎಂದು ಶ್ವೇತ ಭವನದ ಪ್ರಕಟಿಸಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಭಾರತದ ಮುಂಚೂಣಿ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಲು ಹಾಗೂ ಸಹಾಯ ಮಾಡಲು, ಯುಎಸ್ ಕ್ಷಿಪ್ರ ರೋಗ ನಿರ್ಣಯ ಪರೀಕ್ಷಾ ಕಿಟ್‌ಗಳು, ವೆಂಟಿಲೇಟರ್‌ಗಳು ಮತ್ತು ಪಿಪಿಇ ಕಿಟ್‌ಗಳು ಸೇರಿದಂತೆ ಇತರ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಪೂರೈಸಲು ಮುಂದಾಗಿದೆ.