ವಾಷಿಂಗ್ಟನ್ (ಅಮೆರಿಕ):ನವೆಂಬರ್ 3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇಲೆ ಇರಾನ್ನ ಐದು ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.
ಈ ಕುರಿತು ಅಮೆರಿಕ ಖಜಾನೆ ಇಲಾಖೆ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಖಜಾನೆ ಇಲಾಖೆಯ ಕಚೇರಿಯಾದ ಆಫೀಸ್ ಆಫ್ ಫಾರಿನ್ ಅಸೆಟ್ಸ್ ಕಂಟ್ರೋಲ್ ಕಚೇರಿಯು ಇರಾನ್ನ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್- ಕ್ವಾಡ್ ಫೋರ್ಸ್(IRGC-QF), ಹಾಗೂ ಬಯಾನ್ ರಾಸನೆ ಗೋಸ್ಟರ್ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿದೆ.
ಇದರ ಜೊತೆಗೆ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್- ಕ್ವಾಡ್ ಫೋರ್ಸ್ ಅಧೀನಕ್ಕೆ ಒಳಪಟ್ಟ ಇರಾನಿನ ಇಸ್ಲಾಮಿಕ್ ರೇಡಿಯೋ ಮತ್ತು ಟೆಲಿವಿಷನ್ ಯೂನಿಯನ್ (IRTVU) ಮತ್ತು ಇಂಟರ್ನ್ಯಾಷನಲ್ ಯೂನಿಯನ್ ಆಫ್ ವರ್ಚುವಲ್ ಮೀಡಿಯಾ (IUVM)ಗೂ ನಿರ್ಬಂಧ ಹೇರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಿರ್ಬಂಧದ ಪರಿಣಾಮವಾಗಿ ಅಮೆರಿಕ ಜೊತೆಗೆ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ವ್ಯವಹಾರವನ್ನು ಈ ಸಂಸ್ಥೆಗಳೊಂದಿಗೆ ಮಾಡುವುದಿಲ್ಲ.
ಈಗಾಗಲೇ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹಾಗೂ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್- ಕ್ವಾಡ್ ಫೋರ್ಸ್ಗಳ ಮೇಲೆ 2007ರಿಂದ ಕೆಲವೊಂದು ಅಮೆರಿಕದ ಪ್ರಾಧಿಕಾರಗಳು ನಿರ್ಬಂಧ ಹೇರಿವೆ.
ಅಮೆರಿಕದ ಖಜಾನೆ ಇಲಾಖೆಯ ಪ್ರಕಟಣೆಯಂತೆ ಬಯಾನ್ ಗೋಸ್ಟರ್ ಸಂಸ್ಥೆ 2015ರಿಂದ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್- ಕ್ವಾಡ್ ಫೋರ್ಸ್ ಮೂಲಭೂತವಾದವನ್ನು ಹರಡುವ ಸಂಸ್ಥೆಯಾಗಿದೆ. ಇಂಟರ್ನ್ಯಾಷನಲ್ ಯೂನಿಯನ್ ಆಫ್ ವರ್ಚುವಲ್ ಮೀಡಿಯಾ ಹಾಗೂ ಇಸ್ಲಾಮಿಕ್ ರೇಡಿಯೋ ಮತ್ತು ಟೆಲಿವಿಷನ್ ಯೂನಿಯನ್ಗಳು ಬಯಾನ್ ಗೋಸ್ಟರ್ ಸಂಸ್ಥೆಗೆ ಅಮೆರಿಕ ಜನರನ್ನು ಕಾರ್ಯಕ್ರಮಗಳ ಮೂಲಕ ತಲುಪಲು ಸಹಕರಿಸಿದೆ ಎಂದು ಹೇಳಲಾಗಿದೆ.
ಈ ಹೊಸ ನಿರ್ಬಂಧದಿಂದಾಗಿ ಈ ಸಂಸ್ಥೆಗಳ ಎಲ್ಲಾ ಆಸ್ತಿ ಅಮೆರಿಕದ ನ್ಯಾಯಾಂಗದ ಅಧೀನಕ್ಕೆ ಬರಲಿದೆ. ಈ ಸಂಸ್ಥೆಗಳೊಡನೆ ಅಮೆರಿಕದ ಜನತೆ ಸಂಪರ್ಕ ಹೊಂದುವುದನ್ನು ಕೂಡಾ ತಡೆಹಿಡಿಯಲಾಗುತ್ತದೆ.