ವಾಷಿಂಗ್ಟನ್: ಅಮೆರಿಕ ಮತ್ತು ರಷ್ಯಾದ ನಡುವೆ ಮಾಡಿಕೊಂಡಿದ್ದ 'ಹೊಸ START' ಪ್ರಮುಖ ಪರಮಾಣು ಒಪ್ಪಂದವನ್ನು ಮುಂದಿನ ಐದು ವರ್ಷಗಳವರೆಗೆ ಅಧಿಕೃತವಾಗಿ ವಿಸ್ತರಿಸಲಾಗಿದೆ ಎಂದು ಉಭಯ ದೇಶಗಳ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮುಂದಿನ 5 ವರ್ಷಗಳವರೆಗೆ 'ನ್ಯೂ START' ಒಪ್ಪಂದ ವಿಸ್ತರಣೆ - ಅಮೆರಿಕ ಮತ್ತು ರಷ್ಯಾ ಒಪ್ಪಂದ
ಪರಮಾಣು ಅಸ್ತ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೆ ಸಂಬಂಧಿಸಿದ ಅವೆುರಿಕ ಮತ್ತು ರಷ್ಯಾದ ನಡುವೆ ಮಾಡಿಕೊಂಡಿದ್ದ 'ನ್ಯೂ ಸ್ಟಾರ್ಟ್' ಒಪ್ಪಂದವನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ಉಭಯ ದೇಶಗಳು ಖಚಿತಪಡಿಸಿವೆ.
![ಮುಂದಿನ 5 ವರ್ಷಗಳವರೆಗೆ 'ನ್ಯೂ START' ಒಪ್ಪಂದ ವಿಸ್ತರಣೆ New START](https://etvbharatimages.akamaized.net/etvbharat/prod-images/768-512-10494839-848-10494839-1612422302002.jpg)
ರಷ್ಯಾದ ವಿದೇಶಾಂಗ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, "ಹೊಸ START" ಅಥವಾ ಹೊಸ ಕಾರ್ಯತಂತ್ರ ಶಸ್ತ್ರಾಸ್ತ್ರ ಕಡಿತ ಒಪ್ಪಂದವು 2026 ರ ಫೆಬ್ರವರಿ 5 ರವರೆಗೆ ವಿಸ್ತರಿಸಲಾಗಿದ್ದು, ಯಾವುದೇ ಬದಲಾವಣೆಗಳು ಅಥವಾ ಸೇರ್ಪಡೆಗಳಿಲ್ಲದೇ ಈ ಹಿಂದೆ ಮಾಡಿಕೊಂಡಿದ್ದ ನಿಯಮಗಳೇ ಅನ್ವಯವಾಗುತ್ತದೆ ಎಂದು ಹೇಳಿದೆ.
ಪರಮಾಣು ಅಸ್ತ್ರಗಳನ್ನು ನಿಯಂತ್ರಣದಲ್ಲಿರಿಸಲು ಅಮೆರಿಕ ಮತ್ತು ರಷ್ಯಾ ಒಪ್ಪಂದ ಮಾಡಿಕೊಂಡಿದ್ದವು. ಅಮೆರಿಕ ಮತ್ತು ರಷ್ಯಾ ತಲಾ 1,550 ಕ್ಕಿಂತ ಹೆಚ್ಚು ಪರಮಾಣು ಬಾಂಬ್‌ಗಳನ್ನು ಹೊಂದಬಾರದು ಎಂದು ನಿಗದಿಪಡಿಸುವ ಒಪ್ಪಂದ ಇದಾಗಿದೆ. ಫೆಬ್ರವರಿ 5ರಂದು ಈ ಒಪ್ಪಂದ ಮುಕ್ತಾಯವಾಗುತ್ತಿತ್ತು. ಈ ಹಿನ್ನೆಲೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಫೆಬ್ರವರಿ 5 ರಂದು ಮುಕ್ತಾಯಗೊಳ್ಳುವ ಒಪ್ಪಂದವನ್ನು ಮುಂದಿನ ಐದು ವರ್ಷಗಳ ವರೆಗೆ ವಿಸ್ತರಣೆ ಮಾಡುವಂತೆ ಪ್ರಸ್ತಾಪಿಸಿದ್ದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜನವರಿ 29 ರಂದು ಯುಎಸ್ ಜೊತೆಗಿನ ನ್ಯೂ ಸ್ಟಾರ್ಟ್ ಅನ್ನು ಐದು ವರ್ಷಗಳ ವಿಸ್ತರಣೆಗೆ ಅನುಮೋದಿಸುವ ಮಸೂದೆಗೆ ಸಹಿ ಹಾಕಿದರು. ಇದೀಗ ಉಭಯ ದೇಶಗಳು ಮುಂದಿನ ಐದು ವರ್ಷಗಳ ಅವಧಿಗೆ ನ್ಯೂ ಸ್ಟಾರ್ಟ್ ಒಪ್ಪಂದವನ್ನು ಮುಂದುವರೆಸುವುದಾಗಿ ತಿಳಿಸಿವೆ.