ವಾಷಿಂಗ್ಟನ್: ಕಳೆದ ಎರಡು ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ಸೇನಾ ಯುದ್ಧ ವಿಮಾನಗಳ ಹಾರಾಟದ ಸಂಖ್ಯೆಯನ್ನು ಹೆಚ್ಚಿಸಿದ್ದು, ಹಿಂದಿನ 24 ಗಂಟೆಗಳಲ್ಲಿ 300 ವಿಮಾನಗಳ ಹಾರಾಟ ಹೆಚ್ಚಳವಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿ ಹೇಳಿದ್ದಾರೆ.
ತೀವ್ರ ಪ್ರತಿರೋಧ ನೀಡುತ್ತಿರುವ ಉಕ್ರೇನ್ ಕೂಡ ವಿಮಾನಗಳ ವೇಗವನ್ನು ಹೆಚ್ಚಿಸಿದೆ. ಆದರೆ ಎಷ್ಟು ವಿಮಾನಗಳನ್ನು ಜಾಸ್ತಿ ಮಾಡಿದೆ ಎಂಬುದರ ಸಂಖ್ಯೆ ನೀಡಲು ನಿರಾಕರಿಸಿದೆ ಎಂದಿದ್ದಾರೆ. ರಕ್ಷಣಾ ವಲಯದಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿರುವ ರಷ್ಯಾ ಹೆಚ್ಚಿನ ವಿಮಾನಗಳನ್ನು ಹೊಂದಿದೆ. ಆದರೆ, ಇನ್ನೂ ಏರ್ ಸುಪಿರಿಯಾರಿಟಿ (ವಾಯು ಶ್ರೇಷ್ಠತೆ) ಹೊಂದಿಲ್ಲ. ಹೆಚ್ಚಿನ ಸೇನಾ ಯುದ್ಧ ವಿಮಾನಗಳು ಆಕಾಶದಿಂದ ನೆಲದ ದಾಳಿಗಳನ್ನು ಒಳಗೊಂಡಿರುತ್ತವೆ. ಆದರೆ ರೆಡಾರ್ ಕಾರ್ಯಾಚರಣೆಯ ಗುರಿಗಳ ಮೇಲೆ ಹಾಗೂ ಉಕ್ರೇನ್ ವಾಯುಪ್ರದೇಶದಲ್ಲಿ ರಷ್ಯಾ ಯುದ್ಧ ವಿಮಾನಗಳು ಹೆಚ್ಚು ಸಮಯ ಕಳೆಯಲು ಆಗುತ್ತಿಲ್ಲ ಎಂದು ಅಧಿಕಾರಿ ವಿವರಿಸಿದ್ದಾರೆ.
ವ್ಲಾಡಿಮಿರ್ ಪುಟಿನ್ ಸೇನೆಯ ಯುದ್ಧ ವಿಮಾನಗಳನ್ನು ಗುರಿಯಾಗಿಸಲು ಉಕ್ರೇನ್ ಸೇನೆ ತನ್ನ ಸಣ್ಣ, ದೀರ್ಘ - ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ಡ್ರೋನ್‌ಗಳ ಬಳಕೆಯನ್ನು ಮುಂದುವರೆಸಿದೆ. ರಷ್ಯನ್ನರು ಉತ್ತರ ಕಪ್ಪು ಸಮುದ್ರದಲ್ಲಿ ನೌಕಾ ಚಟುವಟಿಕೆಯನ್ನು ಹೆಚ್ಚಿಸಿದ್ದಾರೆ. ಆದರೆ, ಒಡೆಸಾದ ಮೇಲೆ ದಾಳಿಯ ಯಾವುದೇ ಸೂಚನೆಗಳಿಲ್ಲ.