ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ, ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಟ್ರಂಪ್ ಅವರ ಆಪ್ತ ಸಹಾಯಕಿ ಹಾಪ್ ಹಿಕ್ಸ್ ಅವರ ಕೊರೊನಾ ವರದಿ ನಿನ್ನೆ ಪಾಸಿಟಿವ್ ಬಂದಿತ್ತು. ಕಳೆದೊಂದು ವಾರದಿಂದ ಹಾಪ್ ಹಿಕ್ಸ್ ಜೊತೆ ಟ್ರಂಪ್ ಹೆಚ್ಚು ಸಮಯ ಕಳೆದಿದ್ದು, ವಿಷಯ ತಿಳಿಯುತ್ತಿದ್ದಂತಯೇ ಟ್ರಂಪ್ ಹಾಗೂ ಮೆಲಾನಿಯಾ ಕೋವಿಡ್ ಟೆಸ್ಟ್ಗೆ ಒಳಗಾಗಿದ್ದರು.
ಬಳಿಕ ಈ ಬಗ್ಗೆ ಟ್ವೀಟ್ ಮಾಡಿದ್ದ ಟ್ರಂಪ್, "ಸಣ್ಣ ವಿರಾಮವನ್ನೂ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದ ಹಾಪ್ ಹಿಕ್ಸ್ಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ನಾನು ಹಾಗೂ ಪ್ರಥಮ ಮಹಿಳೆ ನಮ್ಮ ಕೋವಿಡ್ ವರದಿಗಾಗಿ ಕಾಯುತ್ತಿದ್ದು, ಕ್ವಾರಂಟೈನ್ ಪ್ರಕ್ರಿಯೆ ಶುರು ಮಾಡಲಿದ್ದೇವೆ" ಎಂದು ಹೇಳಿದ್ದರು.
ಇದೀಗ ಟ್ರಂಪ್ ಹಾಗೂ ಮೆಲಾನಿಯಾ ಇಬ್ಬರ ವರದಿಯೂ ಪಾಸಿಟಿವ್ ಬಂದಿದೆ. "ನಾವು ನಮ್ಮ ಕ್ವಾರಂಟೈನ್ ಪ್ರಕ್ರಿಯೆ ಪ್ರಾರಂಭಿಸಲಿದ್ದೇವೆ. ಶೀಘ್ರದಲ್ಲೇ ಇಬ್ಬರೂ ಜೊತೆಯಾಗೇ ಸೋಂಕಿನಿಂದ ಚೇತರಿಸಿಕೊಳ್ಳುತ್ತೇವೆ" ಎಂದು ಟ್ರಂಪ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.