ಜಿನಿವಾ: ಅಮೆರಿಕ ಕೊರೊನಾ ಮಹಾಮಾರಿಗೆ ಹೊಸ ಕೇಂದ್ರ ಬಿಂದುವಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ವಕ್ತಾರ ಮಾರ್ಗರೇಟ್ ಹ್ಯಾರೀಸ್ ಆತಂಕ ವ್ಯಕ್ತಪಡಿಸಿದ್ದಾರೆ. ಯೂರೋಪಿನಲ್ಲಿ ತೀವ್ರಗತಿಯಲ್ಲಿ ಕೊರೊನಾ ಹರಡುತ್ತಿದ್ದು ಅಮೆರಿಕಾದಲ್ಲಿಯೂ ಕೂಡಾ ಆತಂಕ ಮೂಡಿಸಿದೆ ಎಂದು ಜಿನೆವಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾರ್ಗರೇಟ್ ಹ್ಯಾರೀಸ್ ಸ್ಪಷ್ಟಪಡಿಸಿದ್ದಾರೆ.
WHO ಅಲರ್ಟ್: ಕೊರೊನಾ ನಿಯಂತ್ರಣಕ್ಕೆ 2 ಟ್ರಿಲಿಯನ್ ಡಾಲರ್ ಮೀಸಲಿಡಲು ದೊಡ್ಡಣ್ಣನ ಚಿಂತನೆ - ಜಿನಿವಾ
ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಕೊರೊನಾ ವೈರಸ್ ಸವಾಲಾಗಿ ಕಾಡುತ್ತಿದೆ. ಸದ್ಯಕ್ಕೆ 55 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು 797 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ತಡೆಯಲು 2 ಟ್ರಿಲಿಯನ್ ಡಾಲರ್ ಮೀಸಲಿಡಲು ಅಮೆರಿಕಾ ಚಿಂತನೆ ನಡೆಸಿದೆ.
ಅಮೆರಿಕದಲ್ಲಿ 797 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಸುಮಾರು 55,222 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. 354 ಮಂದಿ ಕೊರೊನಾ ಮಹಾಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಹಿಂದಿನ ಶನಿವಾರದ ವರದಿಯಂತೆ ಶೇಕಡಾ 75ರಷ್ಟು ಹೊಸ ಕೊರೊನಾ ಪ್ರಕರಣಗಳು ಯೂರೋಪ್ ರಾಷ್ಟ್ರಗಳಿಂದ ಕಂಡು ಬಂದರೆ, ಶೇಕಡಾ 15ರಷ್ಟು ಪ್ರಕರಣಗಳು ಅಮೆರಿಕದಿಂದ ಕಂಡುಬಂದಿವೆ. ಹಿಂದಿನ 24ಗಂಟೆಗಳ ಅವಧಿಯಲ್ಲಿ ಅರ್ಧದಷ್ಟು ಹೊಸ ಕೊರೊನಾ ಪ್ರಕರಣಗಳು ಯೂರೋಪಿನಲ್ಲಿ ಕಂಡುಬಂದಿದ್ದು, ಶೇಕಡಾ 40ರಷ್ಟು ಪ್ರಕರಣಗಳು ಅಮೆರಿಕಾದಿಂದ ಕಂಡುಬಂದಿವೆ.
ಅಮೆರಿಕ ಕೊರೊನಾ ತಡೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಅಲ್ಲಿನ ಸಂಸತ್ ಹಾಗೂ ಶ್ವೇತಭವನ 2 ಟ್ರಿಲಿಯನ್ ಡಾಲರ್ಗಳನ್ನು ಕೊರೊನಾದಿಂದ ರಕ್ಷಣೆಗಾಗಿ ಮೀಸಲಿಡಲು ಚಿಂತನೆ ನಡೆಸಲಾಗಿದೆ.