ವಾಷಿಂಗ್ಟನ್:ತಾಲಿಬಾನ್ ಜೊತೆಗಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದು, ಒಪ್ಪಂದದ ಕುರಿತು ಭರವಸೆ ಹಾಗೂ ಪಾರದರ್ಶಕತೆಯನ್ನು ಕೋರಿ ಅಮೆರಿಕದ ಉಭಯ ಪಕ್ಷೀಯ ಜನಪ್ರತಿನಿಧಿಗಳ ಗುಂಪು ಪತ್ರ ಬರೆದಿದೆ.
ಯುದ್ಧದಿಂದ ಹಾನಿಗೊಳಗಾದ ಅಫ್ಘಾನಿಸ್ತಾನದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಲು ಟ್ರಂಪ್ ಆಡಳಿತ ಯೋಚಿಸುತ್ತಿದ್ದು, ಇದೀಗ ತಾಲಿಬಾನ್ ಜೊತೆ ಶಾಂತಿ ಒಪ್ಪಂದಕ್ಕೆ ಸಮೀಪದಲ್ಲಿರುವುದಾಗಿ ರೇಡಿಯೊ ಕಾರ್ಯಕ್ರಮವೊಂದರಲ್ಲಿ ಟ್ರಂಪ್ ಹೇಳಿಕೆ ನೀಡಿದ್ದರು.
ಫೆ.27 ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹಾಗೂ ರಕ್ಷಣಾ ಕಾರ್ಯದರ್ಶಿಗೆ ಜನಪ್ರತಿನಿಧಿಗಳು ಬರೆದ ಪತ್ರದಲ್ಲಿ, ಅಮೆರಿಕ ತಾಲಿಬಾನ್ ಜೊತೆ ಶಾಂತಿ ಒಪ್ಪಂದಕ್ಕೆ ಮುಂದಾಗಿದ್ದು, ಅಮೆರಿಕದ ಭದ್ರತೆ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಭರವಸೆ ಹಾಗೂ ಒಪ್ಪಂದದ ಕುರಿತು ಪಾರದರ್ಶಕತೆ ಕೋರಲಾಗಿದೆ.
ಅಲ್ಲದೇ ಅಮೆರಿಕ ಹಾಗೂ ತಾಲಿಬಾನ್ ನಡುವಿನ ಯಾವುದೇ ಒಪ್ಪಂದವಾದರೂ ಅದು ಸಾರ್ವಜನಿಕವಾಗಿರಬೇಕೇ ಹೊರತು ರಹಸ್ಯವಾಗಿರಬಾರದು ಹಾಗೂ ಯಾವುದೇ ಕಾರಣಕ್ಕೂ ತಾಲಿಬಾನ್ ಜೊತೆ 'ಜಂಟಿ ಭಯೋತ್ಪಾದನಾ ನಿಗ್ರಹ' ಕೇಂದ್ರವನ್ನು ಸ್ಥಾಪಿಸಬಾರದು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.