ವಾಷಿಂಗ್ಟನ್:ವಿದ್ಯಾಭ್ಯಾಸ ಮುಗಿದ ಬಳಿಕವೂ ಉದ್ಯೋಗದ ಉದ್ದೇಶಕ್ಕಾಗಿ ವಿದೇಶಿ ವಿದ್ಯಾರ್ಥಿಗಳು ದೇಶದಲ್ಲಿ ಉಳಿದುಕೊಳ್ಳಬಹುದು ಎಂಬ ನಿಯಮವನ್ನು ತೆಗೆದು ಹಾಕುವಂತೆ ಅಮೆರಿಕ ಸಂಸದರ ಗುಂಪು ಸಂಸತ್ನಲ್ಲಿ ಮತ್ತೊಮ್ಮೆ ಮಸೂದೆ ಮಂಡಿಸಿದ್ದಾರೆ.
ಸಂಸದರಾದ ಪೌಲ್ ಎ ಗೋಸರ್, ಮೋ ಬ್ರೂಕ್ಸ್, ಆ್ಯಂಡಿ ಬಿಗ್ಸ್ ಮತ್ತು ಮ್ಯಾಟ್ ಗಯೆಟ್ಸ್, ಹೈ ಸ್ಕಿಲ್ಲ್ಡ್ ಅಮೆರಿಕನ್ ಆ್ಯಕ್ಟ್ ( High-Skilled Americans Act) ಅನ್ನು ಮಂಡಿಸಿದ್ದಾರೆ. ಇದು ಅಪ್ಶನಲ್ ಪ್ರಾಕ್ಟಿಸ್ ಟ್ರೈನಿಂಗ್ (Optional Practice Training OPT) ಸಂಬಂಧ ಅಮೆರಿಕ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಗೆ ತಿದ್ದುಪಡಿ ತರುತ್ತದೆ.
ಓದಿ : ನಾವು ತಾಲಿಬಾನ್ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿಲ್ಲ: ಇಮ್ರಾನ್ ಖಾನ್ ಸ್ಪಷ್ಟನೆ
ದೇಶದಲ್ಲಿ ಇರುವುದು ಒಂದು ಕಾರ್ಯಕ್ರಮವೇ ಹೊರತು ಕಾನೂನಲ್ಲ. ಇದು ದೇಶದ ಕಾರ್ಮಿಕರನ್ನು ಹೊರಗಿಟ್ಟು, ವಿದೇಶಿಗರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲು ಸಹಕಾರಿಯಾಗಿದೆ. ಒಪಿಟಿ ಎಂದರೆ ಇದು ಒಂದು ರೀತಿಯಲ್ಲಿ ದೇಶದ ಕಾರ್ಮಿಕರನ್ನು ಉದ್ಯೋಗದಿಂದ ದೂರ ಇಡುವ ಕಾನೂನು ಎಂದು ಸಂಸದ ಗೋಸರ್ ಹೇಳಿದ್ದಾರೆ.
ಹೈ ಸ್ಕಿಲ್ಲ್ಡ್ ಅಮೆರಿಕನ್ ಆ್ಯಕ್ಟ್ ಅನ್ನು ಮೊದಲ ಬಾರಿಗೆ 116 ನೇ ಅಮೆರಿಕನ್ ಸಂಸತ್ನಲ್ಲಿ ಗೋಸರ್ ಮಂಡಿಸಿದ್ದರು. ಅಲ್ಲದೇ ಎರಡು ಸಲ ಅಮೆರಿಕ ಕಾರ್ಮಿಕರ ಪರವಾಗಿ ಹೋಂ ಲ್ಯಾಂಡ್ ಸೆಕ್ಯೂರಿಟಿ ಡಿಪಾರ್ಟ್ಮೆಂಟ್ ವಿರುದ್ದ ಒಪಿಟಿ ತೆಗೆದು ಹಾಕುವಂತೆ ಅಮಿಕಸ್ ಬ್ರೀಫ್ಸ್ ( ಪ್ರಕರಣಕ್ಕೆ ಸಂಬಂಧಪಡದ ವ್ಯಕ್ತಿ ಪ್ರಕರಣದ ಪರವಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡುವುದು) ಗೆ ಸಹಿ ಹಾಕಿದ್ದರು.