ವಾಷಿಂಗ್ಟನ್ (ಅಮೆರಿಕ): 2021ರಿಂದ ಈವರೆಗೆ ಯುನೈಟೆಡ್ ಸ್ಟೇಟ್ಸ್ನಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಶೇ.7.5ರಷ್ಟು ಏರಿಕೆಯಾಗಿದ್ದು, ಪರಿಣಾಮ ಈ ಬಾರಿಯ ಜನವರಿ ತಿಂಗಳಲ್ಲಿ ಅಮೆರಿಕ ಹಣದುಬ್ಬರ ಹೆಚ್ಚಳವಾಗಿದೆ. 40 ವರ್ಷಗಳಲ್ಲೇ ಯುಎಸ್ ಹಣದುಬ್ಬರವು ಅತ್ಯಧಿಕ ಮಟ್ಟವನ್ನು ತಲುಪಿದೆ ಎಂದು ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ವರದಿ ಮಾಡಿದೆ.
ಗ್ರಾಹಕರ ಬೆಲೆ ಸೂಚ್ಯಂಕ (CPI) ಸಮೀಕ್ಷೆಯು ವಿವಿಧ ರೀತಿಯ ಸರಕುಗಳ ವೆಚ್ಚವನ್ನು ಅಳೆಯುತ್ತದೆ. ಕಳೆದ ಡಿಸೆಂಬರ್‌ನಿಂದ ಸಿಪಿಐ ಪ್ರಮಾಣವು ಶೇ.0.6 ರಷ್ಟು ಏರಿಕೆಯಾಗಿದ್ದು, 1982ರ ಫೆಬ್ರವರಿ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೋವಿಡ್ನಿಂದಾಗಿ ಜಾಗತಿಕ ವ್ಯಾಪಾರದ ಮೇಲೆ ಪ್ರಭಾವ ಬೀರಿದ್ದು, ಹೆಚ್ಚುತ್ತಿರುವ ಬೇಡಿಕೆ ಮತ್ತು ಪೂರೈಕೆಯ ಕೊರತೆಯಿಂದಾಗಿ ಅಮೆರಿಕದಲ್ಲಿ ಹಣದುಬ್ಬರ ಗರಿಷ್ಠ ಮಟ್ಟ ತಲುಪಿದೆ ಎಂದು ತಜ್ಞರು ಹೇಳುತ್ತಿದ್ದಾರೆ.