ಮಿನ್ನಿಯಾಪೋಲಿಸ್(ಅಮೆರಿಕ):ಆಫ್ರಿಕಾ ಮೂಲದ ಅಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ, ದೋಷಿ ಡೆರೆಕ್ ಚೌವಿನ್‌ಗೆ ಇಪ್ಪತ್ತೆರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ಅಲ್ಲಿನ ಕೋರ್ಟ್ ಮಹತ್ವದ ಆದೇಶ ನೀಡಿದೆ. ದಶಕಗಳಿಂದ ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಹಲ್ಲೆ, ನಿಂದನೆ ಪ್ರಕರಣಗಳಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ಕೇಸ್‌ನಲ್ಲಿ ಸಿಕ್ಕ ದೊಡ್ಡ ವಿಜಯ ಇದಾಗಿದೆ.
ಮಿನ್ನಿಯಾಪೋಲಿಸ್ ಕೋರ್ಟ್‌ನ ನ್ಯಾಯಮೂರ್ತಿ ಪೀಟರ್ ಕಾಹಿಲ್, ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ದೋಷಿ ಚೌವಿನ್ ಮೃತ ಫ್ಲಾಯ್ಡ್ ಕುಟುಂಬಕ್ಕೆ ತಮ್ಮ ಸಂತಾಪವನ್ನು ಸೂಚಿಸಿದರು. ಬಳಿಕ 30 ವರ್ಷಕ್ಕಿಂತ ಕಡಿಮೆ ಶಿಕ್ಷೆಯನ್ನು ನೀಡುವಂತೆ ಮನವಿ ಮಾಡಿದರು.
ಫ್ಲಾಯ್ಡ್ ಅವರ 7 ವರ್ಷದ ಪುತ್ರಿ ರೆಕಾರ್ಡ್ ಮಾಡಿದ್ದ ಸಂದೇಶವನ್ನು ಕೋರ್ಟ್ ಆಲಿಸಿತು. ಜೊತೆಗೆ ಆರೋಪಿ ಚೌವಿನ್ ಅವರ ತಾಯಿಗೂ ಈ ಸಂದೇಶ ಕೇಳಲು ಅವಕಾಶ ನೀಡಿದ ನಂತರ ನ್ಯಾಯಮೂರ್ತಿ ಕಾಹಿಲ್, ಯಾವುದೇ ಭಾವನಾತ್ಮಕ ಅಥವಾ ಸಹಾನುಭೂತಿಯನ್ನು ಆಧರಿಸಿ ಈ ಶಿಕ್ಷೆ ನೀಡುತ್ತಿಲ್ಲ ಎಂದು ಹೇಳಿದರು.
ಇದು ಸಾರ್ವಜನಿಕರ ಅಭಿಪ್ರಾಯವನ್ನು ಆಧರಿಸಿಲ್ಲ. ಆದರೆ ಕಾನೂನು ಮತ್ತು ಪ್ರಕರಣಕ್ಕೆ ನಿರ್ದಿಷ್ಟವಾದ ಸಂಗತಿಗಳನ್ನು ಆಧರಿಸಿದೆ. ಏಕೆಂದರೆ ಈ ಪ್ರಕರಣವು ವಿಶೇಷವಾಗಿ ಫ್ಲಾಯ್ಡ್ ಕುಟುಂಬಕ್ಕೆ ಆಗಿರುವ ಆಳ ಮತ್ತು ಅಗಾದವಾದ ನೋವನ್ನುಂಟು ಮಾಡಿದೆ ಎಂದರು.