ಬ್ರಸೆಲ್ಸ್(ಬೆಲ್ಜಿಯಂ): ರಷ್ಯಾದ ಆಕ್ರಮಣಕಾರಿ ನೀತಿಯ ವಿರುದ್ಧ ಈಗಾಗಲೇ ಯುರೋಪಿಯನ್ ಯೂನಿಯನ್ ಮತ್ತು ಬ್ರಿಟನ್ ಹಲವಾರು ರೀತಿಯ ನಿರ್ಬಂಧಗಳನ್ನು ಹೇರಿವೆ. ಈ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ಆಸ್ತಿಗಳನ್ನು ಫ್ರೀಜ್ (ತಟಸ್ಥ) ಮಾಡುವುದಾಗಿ ಅಮೆರಿಕ ಅಧ್ಯಕ್ಷ ಬೈಡನ್ ಘೋಷಿಸಿದ್ದಾರೆ.
ರಷ್ಯಾದ ವಿರುದ್ಧದ ನಿರ್ಬಂಧ ವಿಧಿಸಿರುವ ಭಾಗವಾಗಿ ಪುಟಿನ್ ಮತ್ತು ಲಾವ್ರೊವ್ ವಿರುದ್ಧ ಆಸ್ತಿಗಳನ್ನು ಫ್ರೀಜ್ ಮಾಡಿರುವುದಾಗಿ ಯೂರೋಪಿಯನ್ ಯೂನಿಯನ್ ಹೇಳಿದ ಬಳಿಕ ಅಮೆರಿಕ ಈ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ.
ಇದಕ್ಕೂ ಮುನ್ನ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಶುಕ್ರವಾರ ಸಭೆಯೊಂದರಲ್ಲಿ ಮಾತನಾಡಿ, ಪುಟಿನ್ ಮತ್ತು ಲಾವ್ರೊವ್ ಆಸ್ತಿಗಳ ಮೇಲೆ ನಿರ್ಬಂಧ ಹೇರುವುದಾಗಿ ತಿಳಿಸಿದ್ದರು. ಈಗ ಸದ್ಯಕ್ಕೆ ಯೂರೋಪಿಯನ್, ಇಂಗ್ಲೆಂಡ್, ಅಮೆರಿಕವು ಪುಟಿನ್ ಮತ್ತು ಸೆರ್ಗೆ ಲಾವ್ರೊವ್ ಆಸ್ತಿಗಳನ್ನು ಫ್ರೀಜ್ ಮಾಡಿವೆ.
ಇದನ್ನೂ ಓದಿ:ರಷ್ಯಾ ವಿರುದ್ಧದ ಖಂಡನಾ ನಿರ್ಣಯದ ಮತದಾನದಿಂದ ದೂರ ಉಳಿದ ಭಾರತ, ಚೀನಾ
ಪುಟಿನ್ ಅಥವಾ ಲಾವ್ರೊವ್ ಅವರ ಆಸ್ತಿಗಳನ್ನು ಫ್ರೀಜ್ ಮಾಡುವ ಮೂಲಕ ನೇರ ಕ್ರಮಕ್ಕೆ ಅಮೆರಿಕ, ಬ್ರಿಟನ್ ಮತ್ತು ಯೂರೋಪಿಯನ್ ಯೂನಿಯನ್ಗಳು ಮುಂದಾಗಿವೆ. ಈ ರಾಷ್ಟ್ರಗಳು ಅಥವಾ ಒಕ್ಕೂಟದಲ್ಲಿರುವ ಆಸ್ತಿಗಳನ್ನು ಬಳಸಿಕೊಳ್ಳಲು ಪುಟಿನ್ ಮತ್ತು ಲಾವ್ರೋವ್ಗೆ ಸಾಧ್ಯವಾಗುವುದಿಲ್ಲ.