ವಾಷಿಂಗ್ಟನ್: ಬಹು ನಿರೀಕ್ಷಿತ ಯುಎಸ್ ಚುನಾವಣೆ ಪ್ರಾರಂಭವಾಗಿದೆ. ಈಶಾನ್ಯ ರಾಜ್ಯ ನ್ಯೂ ಹಾಂಪ್ಶೈರ್ನ ಪಟ್ಟಣಗಳಾದ ಡಿಕ್ಸ್‌ವಿಲ್ಲೆ ನಾಚ್ ಮತ್ತು ಮಿಲ್ಲಿಸ್ಫೈಡ್ನಿಂದ ಮೊದಲ ಮತಗಳು ಚಲಾವಣೆಯಾಗಿದೆ.
ತಡರಾತ್ರಿ ಚುನಾವಣೆ ಪ್ರಾರಂಭವಾಗಿದ್ದು, ಜನರು ಹೊಸ ಯುಎಸ್ ಅಧ್ಯಕ್ಷ, ನ್ಯೂ ಹಾಂಪ್ಶೈರ್ ರಾಜ್ಯದ ಗವರ್ನರ್ ಮತ್ತು ಯೂನಿಯನ್ ಮತ್ತು ರಾಜ್ಯ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಕ್ಸಿನುವಾ ವರದಿ ಮಾಡಿದೆ.
ಡಿಕ್ಸ್‌ವಿಲ್ಲೆ ನಾಚ್‌ನ ಬಾಲ್ಸಾಮ್ಸ್ ರೆಸಾರ್ಟ್‌ನಲ್ಲಿರುವ ತಾತ್ಕಾಲಿಕ "ಬ್ಯಾಲೆಟ್ ರೂಮ್" ನಲ್ಲಿ, ಸ್ಥಳೀಯ ನೋಂದಾಯಿತ ಐದು ಮತದಾರರಲ್ಲಿ ಒಬ್ಬರಾದ ಲೆಸ್ ಒಟ್ಟನ್ ಮೊದಲ ಮತ ಚಲಾಯಿಸಿದರು. ಕೋವಿಡ್ ಬಿಕ್ಕಟ್ಟಿನ ನಡುವೆಯೂ ಮಹಾ ಮತಯುದ್ದ ಪ್ರಾರಂಭವಾಗಿದೆ. ಅಮೆರಿಕನ್ನರು ಎರಡೂ ಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್ ಭವಿಷ್ಯ ನಿರ್ಧರಿಸಲಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೇರಲು ಟ್ರಂಪ್ ಅಥವಾ ಬೈಡನ್ ಶೇ. 50 ಅಂದರೆ 270 ಸ್ಥಾನಗಳನ್ನು ಗೆಲ್ಲಬೇಕು. ಪ್ರಸ್ತುತ ಅಮೆರಿಕ ಸಂಸತ್ತಿನಲ್ಲಿ 538 ಸ್ಥಾನಗಳಿವೆ.ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಜೋ ಬೈಡನ್ ಟ್ರಂಪ್ಗಿಂತ ಮುನ್ನಡೆ ಸಾಧಿಸಿದ್ದಾರೆ. ಬೈಡನ್ ಜಯಗಳಿಸಿ ಅಧ್ಯಕ್ಷರಾದರೆ, ಯುಎಸ್ ಇತಿಹಾಸದ ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷರಾಗುತ್ತಾರೆ. ಒಂದು ವೇಳೆ 74 ವರ್ಷದ ಟ್ರಂಪ್ ಮರು ಆಯ್ಕೆಯಾದರೆ ಅವರು ಎರಡನೇ ಹಿರಿಯ ಅಧ್ಯಕ್ಷರಾಗುತ್ತಾರೆ.
ಸಮೀಕ್ಷೆಗಳಿಂದ ಅಭ್ಯರ್ಥಿಗಳ ವಿಜಯ ನಿರ್ಧರಿಸಲು ಸಾಧ್ಯವಿಲ್ಲ. 2016 ರ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಟ್ರಂಪ್ ವಿರುದ್ಧ ಮುನ್ನಡೆ ಸಾಧಿಸಿದ್ದ ಹಿಲರಿ ಕ್ಲಿಂಟನ್, ಫಲಿತಾಂಶ ಬಂದಾಗ ಸೋತಿದ್ದರು. ಹಾಗಾಗಿ ಈ ಬಾರಿಯ ಚುನಾವಣೆಯೂ ಭಾರಿ ಕುತೂಹಲ ಕೆರಳಿಸಿದೆ.