ವಾಷಿಂಗ್ಟನ್ :2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿ ಆರೋಪಿ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾ ಸಲ್ಲಿಸಿದ 1.5 ಮಿಲಿಯನ್ ಡಾಲರ್ ಮೌಲ್ಯದ ಜಾಮೀನು ಅರ್ಜಿಯನ್ನು ಅಮೆರಿಕ ನ್ಯಾಯಾಲಯ ತಿರಸ್ಕರಿಸಿದೆ.
ಆರು ಜನ ಅಮೆರಿಕನ್ನರು ಸೇರಿ 166 ಜನರ ಸಾವಿಗೆ ಕಾರಣವಾಗಿದ್ದ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಈತ ಭಾಗಿಯಾಗಿದ್ದ ಆರೋಪವಿದೆ. ಹೀಗಾಗಿ ಈತ ಭಾರತಕ್ಕೆ ಮೋಸ್ಟ್ ವಾಂಟೆಡ್ ಆರೋಪಿ. ದಾಳಿ ಘಟನೆ ಬಳಿಕ ಭಾರತದಿಂದ ತಲೆಮರೆಸಿಕೊಂಡಿದ್ದ ರಾಣಾ(59)ನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಕೋರಿಕೆಯ ಮೇರೆಗೆ ಕಳೆದ ಜೂನ್ 10 ರಂದು ಅಮೆರಿಕದ ಲಾಸ್ ಏಂಜೆಲ್ಸ್ನಲ್ಲಿ ಮತ್ತೆ ಬಂಧಿಸಲಾಗಿತ್ತು.
ಮುಂಬೈ ದಾಳಿಯಲ್ಲಿ ಭಾಗಿಯಾದ ಬಳಿಕ ಭಾರತದಿಂದ ಆತ ಪರಾರಿಯಾಗಿದ್ದಾನೆ ಎಂದು ಭಾರತ ಘೋಷಿಸಿತ್ತು. ಅಮೆರಿಕದಲ್ಲಿ ಬಂಧನಕ್ಕೊಳಗಾಗಿದ್ದ ಈತ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ಅಮೆರಿಕದ ಲಾಸ್ ಏಂಜೆಲ್ಸ್ನ ಡಿಸ್ಟ್ರಿಕ್ಟ್ ಕೋರ್ಟ್ ನ್ಯಾಯಾಧೀಶೆ ಜಾಕ್ವೆಲಿನ್ ಚೂಲ್ಜಿಯಾನ್, ಜುಲೈ 21ರಂದು ಪ್ರಕಟಿಸಿದ ತಮ್ಮ 24 ಪುಟಗಳ ಆದೇಶದಲ್ಲಿ, ರಾಣಾಗೆ ಜಾಮೀನು ನೀಡಿದರೆ ಆತ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಇದು ತುಂಬಾ ಅಪಾಯಕಾರಿ ಎಂದು ವಾದಿಸಿ ಜಾಮೀನು ನಿರಾಕರಿಸಿದ್ದಾರೆ.
ರಾಣಾ ಯಾವತ್ತಿಗೂ ಅಪಾಯಕಾರಿ ವ್ಯಕ್ತಿ ಎಂದು ಉದ್ಘರಿಸಿರುವ ಯುಎಸ್ ಸರ್ಕಾರ, ಆತ ಜಾಮೀನಿನ ಮೇಲೆ ಬಿಡುಗಡೆಯಾಗುವುದನ್ನು ವಿರೋಧಿಸಿದೆ. ಒಂದು ವೇಳೆ ಆತನಿಗೆ ಜಾಮೀನು ನೀಡಿದರೆ ಆತ ಕೆನಡಾಗೆ ಪಲಾಯನ ಮಾಡಬಹುದು. ಆ ಮೂಲಕ ಭಾರತದಲ್ಲಿ ಮರಣದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆಯಿಂದ ಪಾರಾಗಬಹುದು ಎಂದು ವಾದಿಸಿದೆ.